ಬೆಂಗಳೂರು : ಪಿಜಿ ಮೆಡಿಕಲ್ - ಆಪ್ಷನ್ ದಾಖಲಿಸಲು ಜ.23ರವರೆಗೆ ಅವಕಾಶ

ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಆಪ್ಷನ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪೋರ್ಟಲ್ ಅನ್ನು ತೆರೆದಿದೆ.
ಜನವರಿ 23ರ ಮಧ್ಯಾಹ್ನ 1 ಗಂಟೆವರೆಗೆ ತಮ್ಮ ಆಪ್ಷನ್‌ಗಳನ್ನು ದಾಖಲಿಸಬಹುದು. ಜ.24ರಂದು ಸೀಟ್ ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಜ.28ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೀಟ್ ಹಂಚಿಕೆಯಾದವರು ಜ.28ರಿಂದ ಫೆ.3ರವರೆಗೆ ನಿಗದಿತ ಶುಲ್ಕ ಪಾವತಿಸಬೇಕು. ಫೆ.4ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಕೆಇಎ ಮುಖಾಂತರ ಪ್ರಿ-ಕ್ಲಿನಿಕಲ್/ ಪ್ಯಾರಾ ಕ್ಲಿನಿಕಲ್ ಸೀಟ್ ಪಡೆದವರು ಕ್ಲಿನಿಕಲ್ ಕೋರ್ಸ್‌ಗಳಿಗೆ ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಆದರೆ ಪ್ರಿ ಕ್ಲಿನಿಕಲ್/ ಪ್ಯಾರಾ ಕ್ಲಿನಿಕಲ್ ಸೀಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಾಗುವುದಿಲ್ಲ. ಹಾಗೆಯೇ ಅಖಿಲ ಭಾರತ ಕೋಟಾದಲ್ಲಿ ಸೀಟ್ ಪಡೆದು, ಪ್ರವೇಶ ಪಡೆದವರು ಕೂಡ ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.