ಪೆಗಾಸಸ್ ಕೇಸ್: ಕೇಂದ್ರಕ್ಕೆ ಸುಪ್ರೀಂ ತರಾಟೆ- ವಿಚಾರಣೆಗೆ ಪರಿಣತರ ಸಮಿತಿ ರಚನೆ

ಪೆಗಾಸಸ್ ಕೇಸ್: ಕೇಂದ್ರಕ್ಕೆ ಸುಪ್ರೀಂ ತರಾಟೆ- ವಿಚಾರಣೆಗೆ ಪರಿಣತರ ಸಮಿತಿ ರಚನೆ

ನವದೆಹಲಿ: ಇಸ್ರೇಲ್ ಮೂಲದ ಎನ್‌ಎಸ್‌ಓ ಸಂಸ್ಥೆಯ ಗೂಢಚಾರ ತಂತ್ರಾಂಶವಾದ ಪೆಗಾಸಸ್ ಅನ್ನು ಬಳಸಿ ಭಾರತದ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಮೇಲೆ ಕಣ್ಗಾವಲು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಮೂರು ಸದಸ್ಯರ ಸಮಿತಿ ನೇಮಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಮೂವರು ಸದಸ್ಯರ ಸಮಿತಿಯನ್ನು ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್ ಮೇಲ್ವಿಚಾರಣೆ ನಡೆಸಲಿದೆ. ಡಾ. ನವೀನ್ ಕುಮಾರ್ ಚೌಧರಿ, ಗಾಂಧಿನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಡೀನ್, ಡಾ. ಪ್ರಭಾಹರನ್ ಪಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠದ ಪ್ರಾಧ್ಯಾಪಕ ಮತ್ತು ಡಾ. ಅಶ್ವಿನ್ ಅನಿಲ್ ಗುಮಸ್ತೆ, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇನ್‌ಸ್ಟಿಟ್ಯೂಟ್ ಚೇರ್ ಅಸೋಸಿಯೇಟ್ ಪ್ರೊಫೆಸರ್ ಈ ಮೂವರು ಸಮಿತಿ ಸದಸ್ಯರಾಗಿದ್ದಾರೆ. 'ನಾವು ಸರ್ಕಾರಕ್ಕೆ ನೋಟಿಸ್ ನೀಡಿದ್ದೆವು. ತಾನು ತೆಗೆದುಕೊಂಡ ಎಲ್ಲ ಕ್ರಮಗಳ ಬಗ್ಗೆ ವಿವರ ನೀಡಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಿದ್ದೆವು. ಆದರೂ ಪುನರಾವರ್ತಿತ ಅವಕಾಶಗಳ ನಡುವೆಯೂ ಅವರು ಸ್ಪಷ್ಟತೆ ಇಲ್ಲದ ಸೀಮಿತ ಅಫಿಡವಿಟ್ ಸಲ್ಲಿಸಿದ್ದಾರೆ. ಅವರು ಸ್ಪಷ್ಟವಾಗಿ ತಿಳಿಸಿದ್ದರೆ, ನಮ್ಮ ಮೇಲಿನ ಭಾರವನ್ನು ಕಡಿಮೆ ಮಾಡಬಹುದಾಗಿತ್ತು. ಆದರೆ ಪ್ರತಿ ಬಾರಿ ರಾಷ್ಟ್ರೀಯ ಭದ್ರತಾ ವಿಚಾರ ಎದುರಾದಾಗ ಸರ್ಕಾರ ಯಾವಾಗಲೂ ಮುಕ್ತವಾಗಿರುತ್ತದೆ ಎಂದಲ್ಲ' ಎಂದು ಸುಪ್ರೀಂಕೋರ್ಟ್ ತೀಕ್ಷ್ಣವಾಗಿ ಹೇಳಿದೆ.