ಕೆಪಿಎಸ್‌ಸಿಗೆ ಹೊಸ ಸ್ವರೂಪ: ಸಿಎಂ ಬೊಮ್ಮಾಯಿ

ಕೆಪಿಎಸ್‌ಸಿಗೆ ಹೊಸ ಸ್ವರೂಪ: ಸಿಎಂ ಬೊಮ್ಮಾಯಿ

ಬೆಂಗಳೂರು: 'ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ)ಗೆ ಹೊಸ ಸ್ವರೂಪ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ನಜೀರ್ ಅಹ್ಮದ್ ಪ್ರಶ್ನೆಗೆ ಉತ್ತರಿಸಿದ ಅವರು, 'ಕಾಯಕಲ್ಪ ನೀಡಲು ನಿರ್ಧರಿಸಿದ್ದು, ಈಗಾಗಲೇ ಎರಡು ಸಭೆ ನಡೆಸಲಾಗಿದೆ. ಶೀಘ್ರವೇ ಆಯೋಗಕ್ಕೆ ಹೊಸ ಸ್ವರೂಪ ನೀಡಲಾಗುವುದು. 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ ಮುಖ್ಯ ಪರೀಕ್ಷೆಯ ಉತ್ತರಪತ್ರಿಕೆಯ ಪ್ರತಿಯನ್ನು ಮಾಹಿತಿ ಹಕ್ಕಿನ ಅಡಿ ನೀಡಲು ಕೆಪಿಎಸ್‌ಸಿ ನಿರಾಕರಿಸಿದೆ. ಹೈಕೋರ್ಟ್ ಏಕಸದಸ್ಯ ಪೀಠವು ಉತ್ತರ ಪತ್ರಿಕೆ ನೀಡಲು ಆದೇಶಿಸಿದೆ. ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ' ಎಂದರು. 'ಮುಖ್ಯಪರೀಕ್ಷೆ ಬರೆದು ಫಲಿತಾಂಶ ಬಂದ ಬಳಿಕ ಅಭ್ಯರ್ಥಿಗಳಿಗೆ ಉತ್ತರಪತ್ರಿಕೆ ನೋಡಲು ಅವಕಾಶ ಇಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತರಪತ್ರಿಕೆ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಆದರೆ, ಬೇರೆ ಪ್ರಕರಣಗಳಲ್ಲಿ ಉತ್ತರ ಪತ್ರಿಕೆ ನೀಡಲು ಕೋರ್ಟ್‌ ಆದೇಶಿಸಿದೆ ಎಂದು ಅಭ್ಯರ್ಥಿಗಳು ವಾದಿಸುತ್ತಿದ್ದಾರೆ. ಒಂದು ವೇಳೆ ಆ ರೀತಿಯ ತೀರ್ಪು ಇದ್ದರೆ ಅದನ್ನು ಪರಿಶೀಲಿಸಿ, ಅಭ್ಯರ್ಥಿಗಳಿಗೆ ನೆರವು ನೀಡಲಾಗುವುದು' ಎಂದರು.