ಭವ್ಯ ಭಾರತದ ಭವಿಷ್ಯ ಬರೆಯುವ 'ರಾಷ್ಟ್ರೀಯ ಶಿಕ್ಷಣ ನೀತಿ-2020': ಬಿ.ಸಿ. ನಾಗೇಶ್

ಬೆಂಗಳೂರು: ಭವ್ಯ ಭಾರತದ ಭವಿಷ್ಯವನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಬರೆಯಲಿದೆ. ಈ ಮಹತ್ವದ ಕಾರ್ಯದ ಪ್ರಮುಖ ಪ್ರಕ್ರಿಯೆಗಳು, ಚಟುವಟಿಕೆಗಳು ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ನಾಗೇಶ್ ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಸಾರ ರಚನೆಯಾಗುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಭಿವೃದ್ಧಿಗೆ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಒಳಗೊಂಡ ದಾಖಲೆಯನ್ನು ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬಿಡುಗಡೆ ಮಾಡಿ ಸಚಿವ ನಾಗೇಶ್ ಅವರು ಮಾತನಾಡಿದರು.
‘ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಮತ್ತು ಬದಲಾವಣೆ ತರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರ ಪ್ರಮುಖ ಪ್ರಕ್ರಿಯೆಗಳು ಕರ್ನಾಟಕದಲ್ಲಿ ನಡೆದಿವೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲೇ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.
‘ಭಾರತ ಮೂಲತಃ ಜ್ಞಾನದ ರಾಷ್ಟ್ರವಾಗಿದೆ. ಆದರೆ, ಬ್ರಿಟೀಷರು ಸೇರಿದಂತೆ ಕೆಲ ವ್ಯಕ್ತಿಗಳ ದುರುದ್ದೇಶದಿಂದ ಭಾರತೀಯ ಶಿಕ್ಷಣದ ಮೂಲ ಉದ್ದೇಶ ಮತ್ತು ಸ್ವರೂಪವನ್ನು ಕಳೆದುಕೊಳ್ಳಬೇಕಾಯಿತು. ಬ್ರಿಟೀಷರು ತಮ್ಮ ಅನುಕೂಲಕ್ಕಾಗಿ ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ಪಠ್ಯಕ್ರಮವನ್ನು ಸಿದ್ಧಪಡಿಸಿದ್ದರು. ಆದರೆ, ಈಗ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆ ಸರಿ ದಾರಿಗೆ ಬರುತ್ತಿದೆ. ಈ ಮೂಲಕ ಅಮೂಲಾಗ್ರ ಬದಲಾವಣೆಯಾಗಿ ರಾಷ್ಟ್ರದ ಪ್ರತಿ ಪ್ರಜೆ, ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ನಾಂದಿಯಾಡುತ್ತಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪೊಸಿಷನ್ ಪೇಪರ್‌ಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. 2022-23ನೇ ಸಾಲಿನಿಂದ ಪೂರ್ವ ಬಾಲ್ಯಾವಸ್ಥೆ ಹಂತದಿಂದಲೇ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಸಜ್ಜಾಗಿದೆ. ಈ ಕುರಿತು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ' ಎಂದು ಸಚಿವರು ನುಡಿದರು.