ಬೆಳಗಾವಿ : ವೈಟ್ ಟಾಪಿಂಗ್‌ಗೆ ಹೆಚ್ಚಿದ ಬೇಡಿಕೆ - ಬೆಂಗಳೂರು ಶಾಸಕರೊಂದಿಗೆ ಶೀಘ್ರ ಸಭೆ ಡಿಸಿಎಂ

ಬೆಳಗಾವಿ : ಬೆಂಗಳೂರಿನ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸಲು ವೈಟ್ ಟ್ಯಾಪಿಂಗ್‌ಗೆ ಆದ್ಯತೆ ನೀಡಲಾಗುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ಬೆಂಗಳೂರಿನ ಶಾಸಕರ ಸಭೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹೆಚ್.ಎಸ್ ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದರು.
ಬೆಂಗಳೂರಿನಲ್ಲಿ 1.14 ಕೋಟಿ ವಾಹನಗಳು ಇವೆ. ಅಂದರೆ ಹೆಚ್ಚು ಕಡಿಮೆ ಬೆಂಗಳೂರಿನ ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆ ಕೂಡ ಇದೆ. ನಗರದಲ್ಲಿ ನಿತ್ಯ ಸರಾಸರಿ 1,300 ದ್ವಿಚಕ್ರ ವಾಹನಗಳು ಹಾಗೂ 490 ಕಾರುಗಳು ಹೊಸದಾಗಿ ನೊಂದಣಿಯಾಗುತ್ತಿದ್ದು, ವಾಹನಗಳ ಒತ್ತಡದಿಂದ ರಸ್ತೆಗಳು ಬೇಗನೇ ಹಾಳಾಗುತ್ತಿವೆ ಎಂದರು.
ರಸ್ತೆಗುಂಡಿ ಮುಚ್ಚುವುದೇ ದೊಡ್ಡ ಕೆಲಸವಾಗಿದೆ. ಹೀಗಾಗಿ, ರಸ್ತೆಗುಂಡಿ ಮುಚ್ಚುವ ಕೆಲಸವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಸಾರ್ವಜನಿಕರು ಅಥವಾ ಪೊಲೀಸ್ ಸಿಬ್ಬಂದಿ ಫೋಟೋ ತೆಗೆದು ಕಳುಹಿಸುವ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸುತ್ತಿದ್ದಾರೆ. ವೈಟ್ ಟಾಪಿಂಗ್‌ಗೆ 1000 ಕೋಟಿ ಅನುದಾನವಿದ್ದು, ಮುಖ್ಯರಸ್ತೆಗಳಲ್ಲದೆ ಬೇರೆ ರಸ್ತೆಗಳನ್ನು ಮಾಡಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿ ಕೇಬಲ್‌ಗಳ ಹಾವಳಿ ಹೆಚ್ಚಾಗಿದೆ. ಇದಕ್ಕಾಗಿ ರಸ್ತೆ ಅಗೆಯಲಾಗುತ್ತಿದೆ. ಹೀಗಾಗಿ, ಯೋಜಿತ ರೂಪದಲ್ಲಿ ವೈಟ್ ಟ್ಯಾಪಿಂಗ್ ಕೆಲಸ ಮಾಡಬೇಕಿದೆ. 25 ರಿಂದ 40 ವರ್ಷಗಳ ಕಾಲ ರಸ್ತೆಗಳು ಬಾಳಿಕೆ ಬರುವ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್‌ಗೆ ಆದ್ಯತೆ ನೀಡಲಾಗಿದೆ. ಎಲ್ಲೆಲ್ಲಿ ಇದರ ಅಗತ್ಯವಿದೆ ಎಂಬುದರ ಚರ್ಚೆಗೆ ಸದ್ಯದಲ್ಲೇ ಬೆಂಗಳೂರಿನ ಶಾಸಕರ ಸಭೆ ಕರೆಯಲಿದ್ದೇನೆ ಅಂತಾ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.