ಒಳ ಬೇಗುದಿ ಸ್ಫೋಟ: ಜಿಲ್ಲಾವಾರು ಶಾಸಕರೊಂದಿಗೆ ತಿಂಗಳಿಗೊಮ್ಮೆ ಸಭೆ ನಡೆಸುವೆ - ಸಿಎಂ

ಬೆಂಗಳೂರು: ನನ್ನ ಕೆಲಸದ ಒತ್ತಡದ ನಡುವೆಯೂ ಕೊಂಚ ಬಿಡುವು ಮಾಡಿಕೊಂಡು ಇನ್ನು ಮುಂದೆ ತಿಂಗಳಿಗೊಮ್ಮೆ ಜಿಲ್ಲಾವಾರು ನಮ್ಮ ಶಾಸಕರ ಕುಂದು-ಕೊರತೆಗಳನ್ನು ವಿಚಾರಿಸಿಕೊಳ್ಳುವೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ಸಮಾಧಾನ ಮೂಡಿಸಲು ಯತ್ನಿಸಿದರು.
ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಒಳ ಬೇಗುದಿ ಬಗ್ಗೆ ಬಿಸಿ ಬಿಸಿ ಚರ್ಚೆಯಾಗಿದ್ದು, ಶಾಸಕರನ್ನು ಸಮಾಧಾನಪಡಿಸಲು ಸ್ವ ಸಿದ್ದರಾಮಯ್ಯನವರು ಮುಂದಾದರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅತ್ತ ಜಿಲ್ಲಾ ಉಸ್ತುವಾರಿ ಸಚಿವರುಗಳು ಶಾಸಕರನ್ನು ಕಡೆಗಣಿಸಲಾಗುತ್ತಿದ್ದರೆ, ಇತ್ತ ಮತಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆಯ ಗ್ಯಾರಂಟಿಯೂ ಇಲ್ಲ ಎಂದು ಹಲವು ಶಾಸಕರು ನೇರವಾಗಿ ಆರೋಪಿಸಿದ್ದು, ಮುಖ್ಯವಾಗಿ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಬರೆದಿದ್ದರೆನ್ನಲಾದ ಪತ್ರದ ವಿಚಾರವೂ ಚರ್ಚೆಗೆ ಬಂದಿತು. ಇನ್ನು ಇಪ್ಪತ್ತು ಶಾಸಕರು ಸಚಿವರ ಕಾರ್ಯ ವೈಖರಿಗೆ ಬೇಸತ್ತು ಸಹಿ ಹಾಕಿ ಸಿಎಂ ಅವರಿಗೆ ಕಳುಹಿಸಿದ "ಫೇಕ್ ಪತ್ರ" ದ ಮೇಲೆ ಕೆಲ ಹೊತ್ತು ಚರ್ಚೆಯಾಗಿದ್ದು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಇದೆಲ್ಲಕ್ಕೂ ತೇಪೆ ಹಚ್ಚಲು ಮುಂದಾದರೆಂದು ಕಾಂಗ್ರೆಸ್ ನ ಬಲ್ಲ ಮೂಲಗಳು ತಿಳಿಸಿವೆ.