ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಭಾಗವಹಿಸುತ್ತಾರೆ - ಪ್ರಹ್ಲಾದ್ ಜೋಶಿ

ನವದೆಹಲಿ: ಜೆಡಿಎಸ್ ಮುಖಂಡ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಶನಿವಾರ ನಡೆಯಲಿರುವ ಬಿಜೆಪಿ ನೇತೃತ್ವದ ಪಾದಯತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಸಂವಹನ ಕೊರತೆಯಿಂದ ಕೆಲವು ಭಿನ್ನಾಭಿಪ್ರಾಯ ಕೇಳಿ ಬಂದಿದ್ದವು. ಆದರೆ ಅದೆಲ್ಲದರ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಮಾತಾಡಿದ್ದೇವೆ. ಈಗ ಎಲ್ಲ ಸಮಸ್ಯೆ ಬಗೆಹರಿದಿದೆ. ಜೆಡಿಎಸ್ ಬಿಜೆಪಿ ಸಹಿತ ಎನ್‌ಡಿಎ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಜೋಶಿ ತಿಳಿಸಿದರು.
ರಾಜ್ಯ ಸರಕಾರ ಅತ್ಯಂತ ನಿರ್ಲಜ್ಜವಾಗಿ ನಡೆದುಕೊಳ್ಳುತ್ತಿದೆ. ಮುಡಾ ಹಗರಣ ಒಂದು ಹಗರಣವೇ ಅಲ್ಲ ಎಂದು ಸಮರ್ಥನೆಗೆ ಇಳಿದಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದ ಪ್ರಹ್ಲಾದ್ ಜೋಶಿ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾ ಮೋಹನ ದಾಸ್ ಅಗರವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.