ಧಾರವಾಡ : ಸೆಪ್ಟೆಂಬರ್ 25 ರಂದು ಜನತಾ ದರ್ಶನ - ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ : ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ, ಕಾರ್ಮಿಕ ಸಚಿವ ಸಂತೋಷ ಲಾಡ್ ಸೆ.25 ರಂದು ನಗರದ ಸೃಜನಾ ರಂಗಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಾರ್ವಜನಿಕರ ದೂರು, ಅಹವಾಲು ಸ್ವೀಕರಿಸಲು ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ ನಡೆಸಲಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಸಾಮುದಾಯಿಕ ಸಮಸ್ಯೆಗಳ ಕುರಿತು ದೂರು, ಅಹವಾಲುಗಳಿದ್ದಲ್ಲಿ ನಾಳೆಯಿಂದಲೇ ipgrs.karnataka.gov.in ಆನ್ಲೈನ್ ತಂತ್ರಾಂಶದಲ್ಲಿ ದಾಖಲಿಸಬೇಕು. ಆಯಾ ತಾಲೂಕಿನ ತಹಶೀಲ್ದಾರ ಕಚೇರಿಗೆ ತೆರಳಿ ತಮ್ಮ ಅಹವಾಲು ಸಲ್ಲಿಸಿದಲ್ಲಿ ಆಯಾ ಕಚೇರಿ ಸಿಬ್ಬಂದಿ ipgrs ಸಿಸ್ಟಮ್‌ದಲ್ಲಿ ದಾಖಲಿಸುತ್ತಾರೆ ಎಂದು ಹೇಳಿದರು.
ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಅಹವಾಲು ಸಲ್ಲಿಸಬಹುದು. ಸಂಬಂಧಪಟ್ಟ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಜನತಾ ದರ್ಶನದಲ್ಲಿ ಉಪಸ್ಥಿತರಿರುತ್ತಾರೆ. ಸ್ಥಳದಲ್ಲಿಯೇ ನಿಯಮಾನುಸಾರ ಪರಿಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಕ್ರಮವಹಿಸಲಾಗುವುದು. ಮತ್ತು ಕಾನೂನಾತ್ಮಕ ಕ್ರಮಗಳ ಅಗತ್ಯವಿದ್ದಲ್ಲಿ ದೂರುದಾರರಿಗೆ ಹಿಂಬರಹ ನೀಡಿ ಕಾಲಮಿತಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಪ್ರತಿ ತಿಂಗಳು ನಡೆಯಲಿದೆ. ಜಿಲ್ಲಾಧಿಕಾರಿಯಾದ ತಾವು ಪ್ರತಿ 15 ದಿನಗಳಿಗೊಮ್ಮೆ ಒಂದು ತಾಲೂಕಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ತಾಲೂಕಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.