ದೆಹಲಿ ಸರ್ಕಾರಕ್ಕೆ ಹಿನ್ನಡೆ - ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ತಡೆ ತರಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಮೇ 19, 2023ರಂದು ಜಾರಿಮಾಡಲಾದ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆ, 2023ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
ಹೌದು. ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ಮೇಲೆ ನಿಯಂತ್ರಣ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಅಸಾಂವಿಧಾನಿಕವಾಗಿದ್ದು, ಅದನ್ನು ತಕ್ಷಣವೇ ತಡೆಹಿಡಿಯಬೇಕು ಎಂದು ದೆಹಲಿ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿತ್ತು. ಆದರೆ ಸುಗ್ರೀವಾಜ್ಞೆಗೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಮುಂದಿನ ವಾರ ಮತ್ತೆ ಅರ್ಜಿಯ ವಿಚಾರಣೆ ನಡೆಸಲಿದೆ. ಇದರಿಂದಾಗಿ ದೆಹಲಿ ಸರ್ಕಾಟಕ್ಕೆ ಹಿನ್ನಡೆ ಉಂಟಾಗಿದೆ.
ಸುಗ್ರೀವಾಜ್ಞೆಗೆ ತುರ್ತಾಗಿ ತಡೆಯಾಜ್ಞೆ ತರಲಾಗದು. ವಾದ-ಪ್ರತಿವಾದ ಆಲಿಸುವ ಮುನ್ನವೇ ಕ್ರಮ ಕೈಗೊಳ್ಳುವುದು ಬೇಡ. ನಾವು ಮೊದಲು ನೋಟಿಸ್ ಜಾರಿ ಮಾಡುತ್ತೇವೆ ಎಂದು ಸಿಜೆಐ ನೇತೃತ್ವದ ನ್ಯಾಯಪೀಠವು ಹೇಳಿದೆ. ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 17ಕ್ಕೆ ನಿಗದಿಪಡಿಸಿದೆ.