IND vs SA 3rd Test: ಫೈನಲ್ ಟೆಸ್ಟ್ ಆಡಲು ಕೇಪ್ಟೌನ್ಗೆ ಬಂದ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ

ಕೇಪ್ಟೌನ್: ಹರಿಣರ ವಿರುದ್ಧದ ಫೈನಲ್ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾದ ಕೇಪ್ಟೌನ್ಗೆ ಬಂದಿಳಿದಿದ್ದು, ಹೋಟೆಲ್ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಕೇಪ್ಟೌನ್ನಲ್ಲಿ ಜನವರಿ 11ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಉಭಯ ತಂಡದ ಪ್ಲೇಯರ್ಸ್ ಕೋವಿಡ್ ಪ್ರೋಟೋಕಾಲ್ ಪಾಲನೆ ಮಾಡುವ ಮೂಲಕ ಕೇಪ್ಟೌನ್ಗೆ ಆಗಮಿಸಿವೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿದ್ದು, ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಆಗಲಿದೆ. ಜೋಹಾನ್ಸ್ಬರ್ಗ್ನಲ್ಲಿ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೇಪ್ಟೌನ್ಗೆ ಆಗಮಿಸಿದ್ದು, ಹೋಟೆಲ್ನಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಭಾರತದ ಪ್ಲೇಯರ್ಸ್ ಹೋಟೆಲ್ನೊಳಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಂತೆ ಸಂಗೀತಗಾರರು ದಕ್ಷಿಣ ಆಫ್ರಿಕಾದ ಸಾಂಪ್ರದಾಯಿಕ ಶೈಲಿಯಲ್ಲಿ ಹಾಡುವ ಮೂಲಕ ಅವರನ್ನು ಸ್ವಾಗತ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ತುಣುಕೊಂದನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.