ಹುಬ್ಬಳ್ಳಿ: ಹೆಚ್ಚುತ್ತಿರುವ ಸೈಬರ್ ಅಪರಾಧ; ವ್ಯಕ್ತಿಯೊಬ್ಬನಿಗೆ 1.49 ಲಕ್ಷ ವಂಚನೆ

ಹುಬ್ಬಳ್ಳಿ: ಫೋನ್ ಪೇಯಿಂದ ಕ್ರೆಡಿಟ್ ಕಾರ್ಡ್ ಮೂಲಕ 20 ಸಾವಿರ ರೂ. ಪಾವತಿಸಿದರೆ 40 ಸಾವಿರ ರೂ. ಬರುತ್ತದೆ ಎಂಬ ಲಿಂಕ್ ಒಂದನ್ನು ಕಳುಹಿಸಿದ ಅಪರಿಚಿತ ವ್ಯಕ್ತಿ 1.49 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿಯ ಬಸವೇಶ್ವರ ನಗರದ ನಿವೃತ್ತ ಶಿಕ್ಷಕ ಅಶೋಕ ಠಾಕೂರ ವಂಚನೆಗೀಡಾದವರು. ಅಶೋಕ ಠಾಕೂರ ಸ್ನೇಹಿತ ಡಾ. ಎಂ.ಜೆ. ಜೀವಣ್ಣವರ ಆಸ್ಪತ್ರೆಗೆ ಹೋಗಿದ್ದರು. ಅಪರಿಚಿತನೊಬ್ಬ ಜೀವಣ್ಣವರ ಅವರಿಗೆ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿದ್ದ. ಹಿಂದಿ ಅರ್ಥವಾಗುವುದಿಲ್ಲ ಎಂದು ಹೇಳಿ ಅವರು ಸ್ನೇಹಿತ ಅಶೋಕ ಠಾಕೂರ್‌ಗೆ ಮೊಬೈಲ್ ಫೋನ್ ಹಸ್ತಾಂತರಿಸಿದರು. ಧ್ವನಿ ಸರಿಯಾಗಿ ಕೇಳುವುದಿಲ್ಲ ಎಂದು ಅಶೋಕ ಅವರು ಅಪರಿಚಿತನಿಗೆ ತಮ್ಮ ಮೊಬೈಲ್ ಫೋನ್ ಸಂಖ್ಯೆ ನೀಡಿದರು. ಅದಕ್ಕೆ ಕರೆ ಮಾಡಿದ ಅಪರಿಚಿತ, ಕೋವಿಡ್‌ಗೆ ಸಂಬಂಧಿಸಿ 25 ಜನರ ರಕ್ತ ಪರೀಕ್ಷೆ ಮಾಡುವುದಿದೆ ಎಂದು ಹೇಳಿ, 25 ಸಾವಿರ ರೂ. ಮುಂಗಡ ಪಾವತಿಸುವುದಾಗಿ ಹೇಳಿದ. ಅದೇ ವೇಳೆ, ಫೋನ್ ಪೇಯಿಂದ ಕ್ರೆಡಿಟ್ ಕಾರ್ಡ್ ಮೂಲಕ 20 ಸಾವಿರ ರೂ. ಪಾವತಿಸಿದರೆ, 40 ಸಾವಿರ ರೂ. ಬರುತ್ತದೆ ಎಂದು ಲಿಂಕ್ ಒಂದನ್ನು ಕಳುಹಿಸಿದ್ದ. ಅದನ್ನು ನಂಬಿದ ಅಶೋಕ ಅವರು ಲಿಂಕ್ ಒತ್ತಿದಾಗ, ಅವರ ಖಾತೆಯಿಂದ ಅಪರಿಚಿತನು 1.49 ಲಕ್ಷ ರೂ. ಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.