ಹೈವೋಲ್ಟೇಜ್‌ ಸಭೆಯಲ್ಲಿ ಮಹತ್ವದ ನಿರ್ಧಾರ - ಪಾಕ್‌ಗೆ ಜಲಬಾಂಬ್‌, ಪಾಕ್‌ ಪ್ರಜೆಗಳಿಗೆ ದೇಶ ಬಿಡಲು 48 ಗಂಟೆ ಗಡುವು!

ಹೈವೋಲ್ಟೇಜ್‌ ಸಭೆಯಲ್ಲಿ ಮಹತ್ವದ ನಿರ್ಧಾರ - ಪಾಕ್‌ಗೆ ಜಲಬಾಂಬ್‌, ಪಾಕ್‌ ಪ್ರಜೆಗಳಿಗೆ ದೇಶ ಬಿಡಲು 48 ಗಂಟೆ ಗಡುವು!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಬೆನ್ನಲ್ಲೇ ಭದ್ರತಾ ಸಂಪುಟ ಸಮಿತಿ ಸಭೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಎರಡೂವರೆ ಗಂಟೆಗಳ ಹೈವೋಲ್ಟೇಜ್‌ ಸಭೆಯಲ್ಲಿ ಕೆಲವು ಮಹತ್ವದ ಕಠಿಣ ನಿರ್ಧಾರಗಳನ್ನು ಮಾಡಲಾಗಿದೆ. 

ಇದರಲ್ಲಿ ಪ್ರಮುಖವಾಗಿ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡಲು ಭಾರತ ಸರ್ಕಾರ ತೀರ್ಮಾನ ಮಾಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಟ್ಟಾರಿ ಗಡಿಯನ್ನು ಬಂದ್‌ ಮಾಡುವಂತೆ ಸೂಚನೆ ನೀಡಿದೆ. ಅಲ್ಲಿ ನಡೆಯುತ್ತಿದ್ದ ಎಲ್ಲಾ ಸೇನಾ ಕಾರ್ಯಕಮಗಳನ್ನು ರದ್ದು ಮಾಡುವಂತೆ ಭಾರತ ಸರ್ಕಾರ ನಿರ್ಧಾರ ಮಾಡಿದೆ. ಅದರೊಂದಿಗೆ ಭಾರತದಲ್ಲಿರುವ 55 ರಾಜತಾಂತ್ರಿಕರ ಪೈಕಿ 25 ಪಾಕಿಸ್ತಾನದ ರಾಜತಾಂತ್ರಿಕರನ್ನು ಒಂದು ವಾರದ ಒಳಗಾಗಿ ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ. ಇನ್ನು ಭಾರತದಲ್ಲಿ ಇರುವ ಪಾಕಿಸ್ತಾನದ ಪ್ರಜೆಗಳಿಗೆ 48 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರ ಒಳಗಾಗಿ ದೇಶ ಬಿಡುವಂತೆ ಸರ್ಕಾರ ಆದೇಶ ನೀಡಿದೆ. 

ಇನ್ನು ಪಾಕಿಸ್ತಾನದ ಯಾವುದೇ ಪ್ರಜೆಗಳಿಗೆ ವೀಸಾ ಸಿಗೋದಿಲ್ಲ, ಈಗಾಗಲೇ ನೀಡಲಾಗಿರುವ ವೀಸಾ ಇನ್ನು 48 ಗಂಟೆಗಳಲ್ಲಿ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರದ ಎದುರು ಮಿಲಿಟರಿ ಕ್ರಮದ ಆಯ್ಕೆಯೂ ಇದ್ದು, ಇದರ ಬಗ್ಗೆಯೂ ಸಿಸಿಎಸ್‌ನಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ಯಾವುದೇ ಮಾಹಿತಿಯನ್ನು ನೀಡಿಲ್ಲ. 

ನಾಳೆ ಸರ್ವಪಕ್ಷ ಸಭೆ: ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತು ನಾಳೆ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ಪಕ್ಷಗಳೊಂದಿಗೆ ಈ ಬಗ್ಗೆ ಮಾತನಾಡಲಿದ್ದಾರೆ. 

ಈ ಭಯೋತ್ಪಾದಕ ದಾಳಿಯ ಗಂಭೀರತೆಯನ್ನು ಗುರುತಿಸಿ, ಭದ್ರತಾ ಸಂಪುಟ ಸಮಿತಿ (CCS) ಈ ಕೆಳಗಿನ ಕ್ರಮಗಳನ್ನು ನಿರ್ಧರಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

1. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ 1960 ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುತ್ತದೆ. 

2. ಭಾರತದ ಹಾಗೂ ಪಾಕಿಸ್ತಾನದ ನಡುವೆ ಇರುವ ಅಟ್ಟಾರಿ ಸಮಗ್ರ ಚೆಕ್‌ಪೋಸ್ಟ್‌ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ. ಮಾನ್ಯ ಒಪ್ಪಿಗೆಯೊಂದಿಗೆ ಇಲ್ಲಿಂದ ಗಡಿಯನ್ನು ದಾಟಿದವರು ಮೇ 1 ರ ಒಳಗಾಗಿ ಈ ಮಾರ್ಗದ ಮೂಲಕವೇ ವಾಪಾಸಗಬೇಕು ಎಂದು ತಿಳಿಸಲಾಗಿದೆ. 

3. SAARC ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ಹಿಂದೆ ನೀಡಲಾದ ಯಾವುದೇ SPES ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ. SPES ವೀಸಾದಡಿಯಲ್ಲಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆಗೆ ಪ್ರಸ್ತುತ ಭಾರತವನ್ನು ತೊರೆಯಲು 48 ಗಂಟೆಗಳ ಕಾಲಾವಕಾಶವಿದೆ. 

4. ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ಬಿಡಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. 

5. ಪಾಕಿಸ್ತಾದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳನ್ನು ಭಾರತ ವಾಪಾಸ್‌ ಕರೆಸಿಕೊಳ್ಳಲಿದೆ. ಆಯಾ ಹೈಕಮಿಷನ್‌ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.