ಟ್ರಂಪ್ ಜೊತೆಗಿನ ಘರ್ಷಣೆ ಬೆನ್ನಲ್ಲೇ ಉಕ್ರೇನ್‌ನ ಝೆಲೆನ್ಸ್ಕಿಗೆ ಆತ್ಮೀಯ ಸ್ವಾಗತ ಕೋರಿದ ಯುಕೆ

ಟ್ರಂಪ್ ಜೊತೆಗಿನ ಘರ್ಷಣೆ ಬೆನ್ನಲ್ಲೇ ಉಕ್ರೇನ್‌ನ ಝೆಲೆನ್ಸ್ಕಿಗೆ ಆತ್ಮೀಯ ಸ್ವಾಗತ ಕೋರಿದ ಯುಕೆ

ಲಂಡನ್: ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಣ ಮಾತಿನ ಚಕಮಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಈ ಬೆನ್ನಲ್ಲೇ (ಶನಿವಾರ) ಉಕ್ರೇನ್‌ನ ನಾಯಕ ಝೆಲೆನ್ಸ್ಕಿ ಲಂಡನ್‌ಗೆ ಹಾರಿದ್ದು, ಅವರನ್ನು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದಾರೆ. 

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಸಹಕಾರ ನೀಡುವಂತೆ ಕೋರಲು ಉಕ್ರೇನ್ ಅಧ್ಯಕ್ಷರು ಭಾನುವಾರ ಯುರೋಪಿಯನ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮೊದಲು ಝೆಲೆನ್ಸ್ಕಿ ಡೌನಿಂಗ್ ಸ್ಟ್ರೀಟ್ ಕಚೇರಿಯಲ್ಲಿ ಸ್ಟಾರ್ಮರ್ ಅವರೊಂದಿಗೆ ಮಾತುಕತೆಗಾಗಿ ಆಗಮಿಸಿದಾಗ ಜನಸಮೂಹವು ಹರ್ಷೋದ್ಗಾರ ವ್ಯಕ್ತಪಡಿಸಿತು. 

"ನೀವು ಬೀದಿಯಲ್ಲಿ ಆ ಹರ್ಷೋದ್ಗಾರವನ್ನು ಕೇಳಿದ್ದೀರಿ ಎಂದು ನಾನು ಭಾವಿಸುತ್ತೇನೆ. ಯುನೈಟೆಡ್ ಕಿಂಗ್‌ಡಮ್‌ನ ಜನರು ನಿಮ್ಮನ್ನು ಎಷ್ಟು ಬೆಂಬಲಿಸುತ್ತಾರೆ ಎಂಬುದನ್ನು ಪ್ರದರ್ಶಿಸಲು ಹೊರಬರುತ್ತಿದ್ದಾರೆ. ಮತ್ತು ನಿಮ್ಮೊಂದಿಗೆ ನಿಲ್ಲುವ ನಮ್ಮ ಸಂಪೂರ್ಣ ದೃಢಸಂಕಲ್ಪ ಅದು," ಎಂದು ಸ್ಟಾರ್ಮರ್ ಅವರು ಝೆಲೆನ್ಸ್ಕಿ ಅವರಿಗೆ ಹೇಳಿದರು.