ದೇಶದ ಮೊದಲ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಗುಣಮುಖ

ತಿರುವನಂತಪುರ: ದೇಶದ ಮೊದಲ ಮಂಕಿಪಾಕ್ಸ್ ಸೋಂಕಿತ ಕೇರಳದ ವ್ಯಕ್ತಿ ಗುಣಮುಖರಾಗಿದ್ದಾರೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಮಂಕಿಪಾಕ್ಸ್ ಸೋಂಕಿತ ಕೊಲ್ಲಂನ 35 ವರ್ಷದ ವ್ಯಕ್ತಿಗೆ ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದ್ದರಿಂದ ರಾಷ್ಟ್ರೀಯ ವೈರಾಣು ಸಂಸ್ಥೆ ಸೂಚನೆಯಂತೆ 72 ಗಂಟೆಯಲ್ಲಿ ಎರಡು ಬಾರಿ ಪರೀಕ್ಷೆ ನಡೆಸಲಾಗಿದೆ. ಎರಡು ಬಾರಿಯೂ ಎಲ್ಲಾ ಸ್ಯಾಂಪಲ್ ಗಳಲ್ಲಿ ನೆಗೆಟಿವ್ ವರದಿಯಾಗಿದೆ. ರೋಗಿ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದ ಮೇಲಿನ ದುದ್ದುಗಳು ಸಂಪೂರ್ಣವಾಗಿ ಗುಣಮುಖವಾಗಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಆತನ ಕುಟುಂಬ ಸದಸ್ಯರ ಸ್ಯಾಂಪಲ್ ಪರೀಕ್ಷೆ ಫಲಿತಾಂಶದಲ್ಲೂ ನೆಗೆಟಿವ್ ವರದಿಯಾಗಿದೆ. ಪ್ರಸ್ತುತ ಪಾಸಿಟಿವ್ ಕಾಣಿಸಿಕೊಂಡಿದ್ದ ಇತರ ಇಬ್ಬರ ಆರೋಗ್ಯವೂ ಸುಧಾರಿಸಿದೆ. ಇದೇ ರೀತಿಯಲ್ಲಿ ರೋಗ ತಡೆ ಕ್ರಮಗಳು ಮುಂದುವರೆಯಲಿವೆ ಎಂದು ಸಚಿವರು ಹೇಳಿದ್ದಾರೆ.