ದಾವಣಗೆರೆ: ಹಿಜಾಬ್- ಕೇಸರಿ ವಿವಾದ ತಾರಕಕ್ಕೇರಿದ ಹಿನ್ನೆಲೆ: 144 ಸೆಕ್ಷನ್ ಜಾರಿ

ದಾವಣಗೆರೆ:  ಹಿಜಾಬ್- ಕೇಸರಿ ವಿವಾದ ತಾರಕಕ್ಕೇರಿದ ಹಿನ್ನೆಲೆ: 144 ಸೆಕ್ಷನ್ ಜಾರಿ

ದಾವಣಗೆರೆ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ಹರಿಹರ ಹಾಗೂ ದಾವಣಗೆರೆ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹರಿಹರದಲ್ಲಿ ಎಸ್ ಪಿ ರಿಷ್ಯಂತ್ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಹಾಗೂ ಸ್ಥಳೀಯ ಶಾಸಕರು ಕೂಡ ಆಗಮಿಸಿ ಮನವರಿಕೆ ಮಾಡಿದೆವು. ಆದರೆ ಒಂದು ಗುಂಪಿನವರು ತಳ್ಳಾಟ ಹಾಗೂ ಕಲ್ಲು ತೂರಾಟ ನಡೆಸಿದರು. ಆದ್ದರಿಂದ ಅನಿವಾರ್ಯವಾಗಿ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ಮಾಡಲಾಯಿತು. ಪರಿಸ್ಥಿತಿ ತಿಳಿಗೊಳ್ಳುವವರೆಗೂ 144 ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದು ಎಸ್ಪಿ ತಿಳಿಸಿದರು. ಪ್ರತಿಭಟನೆ ನಡೆಸುವ ವೇಳೆ ಸಾವಿರಾರು ಮಂದಿ ಆಗಮಿಸಿದ್ದರು. ಇನ್ನು ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಕುಳಿತಿದ್ದರು. ಪರಿಸ್ಥಿತಿ ಅರಿತು ಎಲ್ಲಾ ವಿದ್ಯಾರ್ಥಿನಿಯರನ್ನು ಬಸ್ ನಲ್ಲಿ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಯಿತು.‌ ವಿದ್ಯಾರ್ಥಿನಿಯರ ಸುರಕ್ಷೆ ನಮ್ಮ ಮೊದಲ ಆದ್ಯತೆಯಾಗಿತ್ತು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದ ಕಾರಣ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಹೇಳಿದರು. ಪೊಲೀಸರಿಗೂ ಕೂಡ ಕಲ್ಲು ಏಟು ಬಿದ್ದಿದ್ದು, ಗಾಯಗೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ.