ಪಂಜಾಬ್ ಸಿಎಂಗೆ ಇನ್ನೊಮ್ಮೆ ಅವಕಾಶ ಕೊಡಬೇಕು: ಸೋನು ಸೂದ್ ಅಭಿಪ್ರಾಯ

ಚಂಡಿಗಢ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಸಿಎಂ ಆಗಿ ಕೆಲಸ ನಿರ್ವಹಿಸಲು ಹೆಚ್ಚು ಸಮಯ ದೊರೆತಿಲ್ಲ. ಹೀಗಾಗಿ ಅವರಿಗೆ ಮತ್ತೊಂದು ಅವಧಿಗೆ ಸಿಎಂ ಆಗಿ ಮುಂದುವರೆಯಲು ಅವರಿಗೆ ಅವಕಾಶ ಕೊಡಬೇಕು. ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ರಾಷ್ಟ್ರೀಯ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿರುವ ಅವರು, ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಒಳ್ಳೆಯ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರು ಯಾವಾಗಲೂ ಪೂರ್ಣ ಮನಸ್ಸಿನಿಂದ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. “ನಾನು ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದೇನೆ. ಕಳೆದ ಮೂರು ತಿಂಗಳಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಶ್ಲಾಘನೀಯವಾಗಿದೆ. ಆದರೆ ಯಾರಿಗೆ ಆದರೂ ಇದು ಕೆಲಸ ಮಾಡಲು ತುಂಬಾ ಕಡಿಮೆ ಸಮಯ. ಅವರು ಬ್ಯಾಟಿಂಗ್‌ಗೆ ಹೋಗಿ ನಿಂತು ಚೆಂಡಿನ ಕಡೆ ಕಣ್ಣು ಇಟ್ಟಿದ್ದರು. ಆದರೆ, ಇದ್ದಕ್ಕಿದ್ದಂತೆ ಚಹಾ ವಿರಾಮ ಘೋಷಿಸಲಾಗಿದೆ. ಚಹಾ ವಿರಾಮದ ನಂತರ ಅವರು ಬ್ಯಾಟಿಂಗ್‌ಗೆ ಮತ್ತೆ ಬರಬೇಕು “ಎಂದು ಸೋನು ಸೂದ್ ಹೇಳಿದ್ದಾರೆ.