ಬೆಂಗಳೂರು : ನಾಳೆಯಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಜಾರಿ

ಬೆಂಗಳೂರು : ನಗರ ಪಾಲಿಕೆ, ಮಹಾನಗರ ಪಾಲಿಕೆ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ನಾಳೆಯಿಂದ ಗ್ರೇಟರ್ ಬೆಂಗಳೂರಾಗಿ ಬದಲಾಗುತ್ತಿದೆ.
ಹೌದು ಬಿಬಿಎಂಪಿಯಾಗಿದ್ದ ಬೆಂಗಳೂರನ್ನು ಗ್ರೇಟರ್ ಬೆಂಗಳೂರನ್ನಾಗಿ ಪರಿವರ್ತನೆ ಮಾಡಿರುವ ಆದೇಶ ಹೊರ ಬಿದ್ದಿದ್ದು, ಆದೇಶದಲ್ಲಿ ನಾಳೆಯಿಂದಲೇ ಗ್ರೇಟರ್ ಬೆಂಗಳೂರು ಆಡಳಿತ ಜಾರಿಗೆ ಬರುತ್ತಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
ಕಾಯ್ದೆಯ ಕಲಂ 1(3)ರ ಅನ್ವಯ ನೇಮಕಾತಿ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಕಲಂ 1(2) ಮತ್ತು ಕಲಂ 3ರ ಪ್ರಕಾರ ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶವೆಂದು ನಾಳೆ ಮತ್ತೊಂದು ಅಧಿಸೂಚನೆಯ ಮೂಲಕ ಘೋಷಿಸಲಾಗುವುದು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಅನ್ವಯ ಮುಂದಿನ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ, ಬಿಬಿಎಂಪಿ ಅಧಿನಿಯಮ, 2020ರ ಅಡಿ ಪ್ರದತ್ತವಾಗಿರುವ ಅಧಿಕಾರ ಮತ್ತು ಕರ್ತವ್ಯಗಳನ್ನು ಸಂಬಂಧಿತ ಅಧಿಕಾರಿಗಳೇ ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಕುರಿತು ಕಾಯ್ದೆಯ ಕಲಂ 7(5) ಮತ್ತು ಕಲಂ 360ರಲ್ಲಿ ಅವಕಾಶ ಕಲ್ಪಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಈ ಮಾಹಿತಿಯನ್ನು ತಿಳಿಸಿದ್ದಾರೆ.