ಹಟ್ಟಿ ಚಿನ್ನದ ಗಣಿಯಲ್ಲಿ ಭೀಕರ ಅಗ್ನಿ ಅವಘಡ

ಹಟ್ಟಿ ಚಿನ್ನದ ಗಣಿಯಲ್ಲಿ ಭೀಕರ ಅಗ್ನಿ ಅವಘಡ

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಸ್ಕ್ರ್ಯಾಪ್ ಯಾರ್ಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ 500ಕ್ಕೂ ಹೆಚ್ಚು ಹಳೆ ಟೈರ್ ಗಳು ಸುಟ್ಟು ಭಸ್ಮಗೊಂಡಿವೆ. ಕಂಪನಿ ವಿಲೇಜ್ ಶಾಫ್ಟ್‌ನಲ್ಲಿ ಕಸಕ್ಕೆ ಹಚ್ಚಿದ ಬೆಂಕಿಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಬೆಂಕಿ ಅವಘಡದ ಸ್ಥಳದ ಪಕ್ಕದಲ್ಲೇ ಮದ್ದಿನ ಮನೆಯಿದೆ. ಕಳೆದ ಎರಡು ಗಂಟೆಯಿಂದ ಹೊತ್ತಿ ಉರಿಯುತ್ತಿದ್ದು, ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರೂ ಸಕಾಲಕ್ಕೆ ಬಂದಿಲ್ಲ. ಹೀಗಾಗಿ ಜನರು, ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಭಾರೀ ಪ್ರಮಾಣದ ಹೊಗೆ ಹೊರಸೂಸುತ್ತಿದ್ದು, ಸುತ್ತಲಿನ ನಿವಾಸಿಗಳು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸುಮಾರು ಐದಾರು ಕಿ.ಮೀ ದೂರದವರೆಗೂ ಬೆಂಕಿ ಹೊತ್ತಿಕೊಂಡಿರುವುದು ಕಾಣಿಸುತ್ತಿದೆ. ಅಲ್ಲದೆ, ಈ ಸ್ಥಳದ ಪಕ್ಕದಲ್ಲೇ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ.