ರಾಜ್ಯದಲ್ಲಿ ಮೂರು ಗ್ಲೋಬಲ್ ಇನ್ನೊವೇಷನ್ ಪಾರ್ಕ್ ಸ್ಥಾಪನೆ - ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಉದ್ಯಮ ವಲಯದ ಬೆಳವಣಿಗೆ ಉತ್ತೇಜಿಸಲು ಬೆಂಗಳೂರು, ಮೈಸೂರು ಮತ್ತು ಬೆಳಗಾವಿಗಳಲ್ಲಿ ಮೂರು ಜಾಗತಿಕ ನಾವೀನ್ಯತಾ ಪಾರ್ಕ್ ಗಳನ್ನು (ಗ್ಲೋಬಲ್ ಇನ್ನೊವೇಷನ್ ಡಿಸ್ಟ್ರಿಕ್ಟ್ಸ್) ಸ್ಥಾಪಿಸುವ ಜೊತೆಗೆ ಮೈಸೂರಿನ ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ತಯಾರಿಕಾ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪ್ರಕಟಿಸಿದರು.
ಅರಮನೆ ಮೈದಾನದಲ್ಲಿ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಶೃಂಗ-24”ವನ್ನು 27ನೇ ಆವೃತ್ತಿ ಉದ್ಘಾಟಿಸಿ ದ ಅವರು, ಸರ್ಕಾರ ಸ್ಥಾಪಿಸಲಿರುವ ಈ ಮೂರು ಜಾಗತಿಕ ನಾವೀನ್ಯತಾ ಪಾರ್ಕ್‌ಗಳು ಜಿ.ಸಿ.ಸಿ.ಗಳಿಗೆ (ಗ್ಲೋಬಲ್ ಕೇಪಬಿಲಿಟಿ ಸೆಂಟರ್) ತಮ್ಮ ಕೇಂದ್ರಗಳನ್ನು ತೆರೆದು ಕಾರ್ಯಾಚರಣೆ ಆರಂಭಿಸಲು ಅನುವು ಮಾಡಿಕೊಡಲಿವೆ ಎಂದು ಹೇಳಿದರು.
ರಾಜ್ಯದ ಸೆಮಿಕಂಡಕ್ಟರ್ ಉತ್ಪಾದಕತೆಯನ್ನು ಕೋಚನಹಳ್ಳಿಯಲ್ಲಿಯ ಎಲೆಕ್ಟ್ರಾನಿಕ್ಸ್ ಮ್ಯಾನಫ್ಯಾಕ್ಚರಿಂಗ್ ಕ್ಲಸ್ಟರ್ ಸದೃಢಗೊಳಿಸಲಿದೆ. ಇದು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ನಗರ-ಗ್ರಾಮೀಣ ಸಮಾನತೆಯನ್ನು ತರುವುದಕ್ಕೂ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೂಪಿಸಲಾಗಿರುವ “ಜಿಸಿಸಿ ಕಾರ್ಯನೀತಿ”ಯನ್ನು ಅನಾವರಣಗೊಳಿಸಿದರು. ಈ ಕುರಿತು ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಈಗ ಇರುವ 875 ಜಿಸಿಸಿ ಘಟಕಗಳ ಜೊತೆಗೆ ಇನ್ನೂ 500 ಜಿಸಿಸಿ ಘಟಕಗಳ ಸ್ಥಾಪನೆ, 3.5 ಲಕ್ಷ ಉದ್ಯೋಗಗಳ ಸೃಷ್ಟಿ ಹಾಗೂ ಆರ್ಥಿಕ ಉತ್ಪಾದನೆಯನ್ನು 50 ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸುವ ಗುರಿಯನ್ನು “ಜಿಸಿಸಿ ಕಾರ್ಯನೀತಿ” ಹೊಂದಿದೆ ಎಂದು ವಿವರಿಸಿದರು.
ಮಂಗಳೂರನ್ನು ಫಿನ್ ಟೆಕ್ ವಲಯವನ್ನಾಗಿ, ಹುಬ್ಬಳ್ಳಿ-ಧಾರವಾಡ ಇವಿ ವಲಯವನ್ನಾಗಿ ಹಾಗೂ ಮೈಸೂರನ್ನು ಡ್ರೋನ್ ವಲಯವನ್ನಾಗಿ ರೂಪಿಸಲು ಸರ್ಕಾರ ಒತ್ತು ನೀಡಲಿದೆ. ನಾವೀನ್ಯತೆ, ಸುಸ್ಥಿರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದ್ದು, ಉದ್ಯಮದ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿದೆ ಎಂದರು.