ಧಾರವಾಡ: ಡ್ರಗ್ಸ್ ಪಾಜಿಟಿವ್ ಪ್ರಕರಣಗಳ ಫಾಲೋಅಪ್ ಮಾಡಲು ಜಿಲ್ಲಾಧಿಕಾರಿ ಸೂಚನೆ

ಧಾರವಾಡ: ಕಳೆದ ಕೆಲವು ದಿನಗಳಿಂದ ಡ್ರಗ್ಸ್ ತಪಾಸಣೆ ಕಾರ್ಯವನ್ನು ಪೊಲೀಸ್ ಇಲಾಖೆ ತೀವ್ರಗೊಳಿಸಿದ್ದು ಶ್ಲಾಘನೀಯ. ಆದರೆ ಡ್ರಗ್ಸ್ ಪಾಜಿಟಿವ್ ಬಂದಿರುವ ಪ್ರತಿ ಪ್ರಕರಣಗಳನ್ನು ಫಾಲೋಅಪ್ ಮಾಡಿ, ನಿಜವಾದ ಕಾರಣೀಕರ್ತರಿಗೆ ಶಿಕ್ಷೆ ಆಗುವಂತೆ ಮಾಡುವ ಮೂಲಕ, ಅವುಗಳನ್ನು ಮುಕ್ತಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾರ್ಕೊ ಕೊ ಆರ್ಡಿನೇಶನ್ ಕಮಿಟಿ ಸಭೆ ಜರುಗಿಸಿ, ಡ್ರಗ್ಸ್ ನಿಯಂತ್ರಣ ಮತ್ತು ಜಾಗೃತಿ ಕಾರ್ಯಕ್ರಮಗಳ ಕುರಿತು ಪರಿಶೀಲಿಸಿ, ಮಾತನಾಡಿದರು.
ಅವಳಿ ನಗರದಲ್ಲಿ ಮಾದಕ ವಸ್ತು ಮತ್ತು ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟದ ಕುರಿತು ತಪಾಸಣೆ, ವಿಚಾರಣೆ ಕೈಗೊಂಡ ಬಗ್ಗೆ ಸಮಿತಿಗೆ ವರದಿ ಸಲ್ಲಿಸಬೇಕು. 354 ಯುವಕರ ಪೈಕಿ 168 ಜನ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಪಾಜಿಟಿವ್ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಡ್ರಗ್ಸ್ ಹಾನಿ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಶಾಲೆ, ಕಾಲೇಜು, ವಿವಿ ಕ್ಯಾಂಪಸ್‍ಗಳು ಡ್ರಗ್ಸ್ ಮುಕ್ತವಾಗಿರುವಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳೊಂದಿಗೆ ಪಾಲಕರು, ಶಿಕ್ಷಕರಲ್ಲಿಯೂ ಮಾದಕ ವಸ್ತುಗಳ ಕುರಿತು ವ್ಯಾಪಕ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಾಗೃತಿ ಕಾರ್ಯಕ್ರಮಗಳಲ್ಲಿ ಇತರ ಇಲಾಖೆಗಳ ಸಹಭಾಗಿತ್ವ ಪಡೆದು, ಉತ್ತಮವಾದ ವ್ಯವಸ್ಥಿತ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲು ಪೊಲೀಸ್ ಇಲಾಖೆಯಿಂದ ಕ್ರಿಯಾ ಯೋಜನೆ ರೂಪಿಸಲು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ.ಬರಮನಿ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜುಗಳ ಪ್ರಾಚಾರ್ಯರು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳು ಮತ್ತು ಮಾದಕ ವಸ್ತು ಹಾಗೂ ಮಾದಕ ದ್ರವ್ಯಗಳ ನಿಯಂತ್ರಣ ತಜ್ಞರು ಭಾಗವಹಿಸಿದ್ದರು.