ಕೇರಳದಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 35ಕ್ಕೆ ಏರಿಕೆ

ತಿರುವನಂತಪುರ: ಕೇರಳದಲ್ಲಿ ರಣಭೀಕರ ಮಳೆ ಸುರಿದಿದೆ. ಪರಿಣಾಮ ಪ್ರವಾಹ, ಭೂಕುಸಿತ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಭಾರಿ ಮಳೆಯಿಂದಾಗಿ ಹಲವೆಡೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಣೆಕಟ್ಟುಗಳು ಭರ್ತಿಯಾಗಿವೆ. ಹಿಡಿದಿಡಲು ಸಾಧ್ಯವೇ ಆಗದೆ ಭಾರಿ ಪ್ರಮಾಣದ ನೀರನ್ನು ಹೊರ ಬಿಡಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಳ ಭಾಗದ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.