ಬಾಲಿವುಡ್ ಡಿಸ್ಕೋ ಡ್ಯಾನ್ಸರ್ ಆಸ್ಪತ್ರೆಗೆ ದಾಖಲು - ಅಭಿಮಾನಿಗಳಲ್ಲಿ ಮೂಡಿದ ಆತಂಕ

ಹಿರಿಯ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆ ನಂತರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹಬ್ಬಿದೆ.
ಆದರೆ ಈ ಬಗ್ಗೆ ಕುಟುಂಬದವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆಸ್ಪತ್ರೆ ಕಡೆಯಿಂದಲೂ ಯಾವುದೇ ಸುತ್ತೋಲೆ ಬಂದಿಲ್ಲ. ಈ ಕಾರಣಕ್ಕೆ ಆತಂಕಕ್ಕೆ ಒಳಗಾಗಿರುವ ಮಿಥುನ್ ದಾ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಆರೋಗ್ಯದ ಕುರಿತು ಮಾಹಿತಿ ನೀಡುವಂತೆ ಕೋರಿಕೊಳ್ಳುತ್ತಿದ್ದಾರೆ.
ಈ ಹಿಂದೆ 2022 ರಲ್ಲಿ, ಮಿಥುನ್ ಚಕ್ರವರ್ತಿ ಆಸ್ಪತ್ರೆಯ ಫೋಟೋ ವೈರಲ್ ಆಗಿತ್ತು, ಅಭಿಮಾನಿಗಳ ಸಹನೆಯ ಕಟ್ಟೆಯೂ ಒಡೆದಿತ್ತು. ಇದರ ನಡುವೆ ಹಲವು ರೀತಿಯ ವದಂತಿಗಳೂ ಹಬ್ಬಿದವು. ಆ ನಂತರ ಮಗ ಮಿಮೋಹ್ ಚಕ್ರವರ್ತಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ತಂದೆಯ ಕಿಡ್ನಿಯಲ್ಲಿ ಕಲ್ಲು ಇದೆ ಎಂದು ಹೇಳಿದ್ದರು. ಇದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆತಂಕ ಪಡುವ ಅವಶ್ಯಕತೆ ಇಲ್ಲವೆಂದಿದ್ದರು.
73ರ ಪ್ರಾಯದ ಮಿಥುನ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 1976ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಿಥುನ್ ಮೊದಲ ಚಿತ್ರದಲ್ಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದರು. ಡಿಸ್ಕೋ ಡ್ಯಾನ್ಸರ್ ಚಿತ್ರದ ಮೂಲಕ ಜಗದ್ವಿಖ್ಯಾತಿಯನ್ನೂ ಗಳಿಸಿದರು. ಚಿತ್ರರಂಗದಲ್ಲಿ ಅಪಾರ ಸಾಧನೆಗೈದ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.