ಬೆಂಗಳೂರು: ಸಿಎಂ ನೇತೃತ್ವದ ಪ್ರತಿಭಟನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ದೂರು!

ಬೆಂಗಳೂರು: ಅರೆ, ಇದೊಳ್ಳೆ ಕತೆಯಾಯ್ತಲ್ಲ! ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಹೋದ್ಯೋಗಿಗಳು. ಆದರೆ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ದೂರು ಕೊಟ್ಟಿದ್ದು ಮಾತ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮೇಲೆ!
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ವಿಧಾನಸೌಧದ ಆವರಣದಲ್ಲಿ ರಾಜಕೀಯ ಕಾರ್ಯಕ್ರಮ (ಪ್ರತಿಭಟನೆ) ನಡೆಸಲು ಮುಖ್ಯಮಂತ್ರಿಯವರಿಗೆ ಅವಕಾಶ ಮಾಡಿಕೊಟ್ಟ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಅಮಾನತು ಮಾಡಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿಯವರ ಅಧೀನದಲ್ಲಿ ಬರುವ ಸರ್ಕಾರದ ಆಡಳಿತ ಯಂತ್ರದ ಭಾಗವಾಗಿರುವ ಮುಖ್ಯ ಕಾರ್ಯದರ್ಶಿಯವರು ಸಿಎಂ ಅವರ ಕಾರ್ಯಕ್ರಮ ತಡೆಯುವ ಅಧಿಕಾರವಿದೆಯೆ? ಅನ್ನೋದು ಸಾಮಾನ್ಯ ಜನರ ಪ್ರಶ್ನೆ. ಬೇಕಿದ್ದರೆ ಬಿಜೆಪಿಯವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಸಿಎಂ ಅವರ ಮೇಲೆಯೇ ದೂರು ದಾಖಲಿಸಬಹುದಾಗಿತ್ತಲ್ಲವೆ? ಹಾಗೆ ಮಾಡದೇ ಬಿಜೆಪಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮೇಲೆ ಕ್ರಮಕ್ಕೆ ಒತ್ತಾಯಿಸಿರೋದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಯಿತು ಅಲ್ಲವೆ?