ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಫಲಾನುಭವಿಗಳ ಸಮಾವೇಶ - ಸಚಿವ ಲಾಡ್

ಧಾರವಾಡ : ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾರಿಗೊಳಿಸಿರುವ ಜನಪರ ಗ್ಯಾರಂಟಿ ಯೋಜನೆಗಳು ರಾಷ್ಟ್ರಕ್ಕೆ ಮಾದರಿಯಾಗಿವೆ. ಗ್ಯಾರಂಟಿ ಪ್ರಯೋಜನವನ್ನು ಪ್ರತಿ ಅರ್ಹ ಪಲಾನುಭವಿಗೆ ತಲುಪಿಸಲು ಜನರಲ್ಲಿ ಗ್ಯಾರಂಟಿಗಳ ಅರಿವು ಮೂಡಿಸುವ ಅಗತ್ಯವಿದ್ದು, ಅದಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು. ಸರ್ಕಾರದ ಅಭಿವೃದ್ದಿ ಯೋಜನೆಗಳನ್ನು ಸಮುದಾಯ, ವ್ಯಕ್ತಿಗಳಿಗೆ ಮುಟ್ಟಿಸಬೇಕು. ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಇಲಾಖೆಗಳಿಗೆ ವಿವಿಧ ಯೋಜನೆಗಳಡಿ ಫಲಾನುಭವಿಗಳ ಸಂಖ್ಯೆ ನಿಗದಿಪಡಿಸಿ, ಗುರಿ ನೀಡಲಾಗಿದೆ. ಸರ್ಕಾರದಿಂದ ಹಂತ ಹಂತವಾಗಿ ಅನುದಾನವೂ ಬಿಡುಗಡೆ ಆಗುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ಇಲಾಖಾ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಫೆಬ್ರುವರಿ ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಫಲಾನುಭವಿಗಳ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ತಹಶೀಲ್ದಾರ ಮತ್ತು ತಾಲೂಕಾ ಪಂಚಾಯತ ಇಓ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸಬೇಕು. ಜಿಲ್ಲಾಮಟ್ಟದ ಸಮಾವೇಶವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕಾಗಿ ಅವರ ದಿನಾಂಕ ಕೇಳಲಾಗಿದೆ ಎಂದು ಸಚಿವರು ತಿಳಿಸಿದರು.
ಜನವರಿ 31 ರಂದು ಕುಂದಗೋಳದಲ್ಲಿ, ಫೆಬ್ರುವರಿ 2 ರಂದು ಹುಬ್ಬಳ್ಳಿಯಲ್ಲಿ ಮತ್ತು ಫೆಬ್ರುವರಿ 5 ರಂದು ಧಾರವಾಡದಲ್ಲಿ ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳ ಪಲಾನುಭವಿಗಳ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ. ಆಯಾ ತಾಲೂಕಿನ ತಹಶೀಲ್ದಾರ ಮತ್ತು ಇಓ ಅವರ ನೇತೃತ್ವದಲ್ಲಿ ಸಮಾವೇಶದ ಸಿದ್ಧತೆ ಆರಂಭಿಸಿ, ನಿಗದಿತ ದಿನಾಂಕಗಳಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ರೋಷನ್ ವೇದಿಕೆಯಲ್ಲಿದ್ದರು.