ಬೆಂಗಳೂರು : ಬಿಬಿಎಂಪಿ ಕೆರೆಗಳು ಭರ್ತಿ - ನಗರದಲ್ಲಿ ಸುರಿದ ಮಳೆಗೆ 63 ಕೆರೆಗಳಲ್ಲಿ ಪೂರ್ಣ ನೀರು!
ಬೆಂಗಳೂರು : ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಒಟ್ಟು 183 ಕೆರೆಗಳ ಪೈಕಿ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಮಾಹಿತಿ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯವು 32,514 ದಶಲಕ್ಷ ಲೀಟರ್‌ಗಳಷ್ಟಿದೆ. ಕಳೆದ ಏಪ್ರಿಲ್ 2025ರಲ್ಲಿ, ಕೆರೆಗಳಲ್ಲಿನ ಒಟ್ಟು ನೀರಿನ ಸಂಗ್ರಹಣೆಯ ಪ್ರಮಾಣವು ಕೇವಲ 10,595 ದಶಲಕ್ಷ ಲೀಟರ್‌ಗಳಿಗೆ ಕುಸಿದಿತ್ತು. ಆ ಸಮಯದಲ್ಲಿ ಕೇವಲ 3 ಕೆರೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿತ್ತು ಮತ್ತು ಸುಮಾರು 63 ಕೆರೆಗಳು ಸಂಪೂರ್ಣವಾಗಿ ಒಣಗುವ ಹಂತದಲ್ಲಿದ್ದವು.
ಆದರೆ, ಕಳೆದ ಒಂದು ವಾರದಿಂದ ನಗರದಲ್ಲಿ ಸುರಿದ ಮಳೆಯಿಂದಾಗಿ ಕೆರೆಗಳಲ್ಲಿ ಒಟ್ಟು 26,056 ದಶಲಕ್ಷ ಲೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಇದು ಏಪ್ರಿಲ್ 2025ಕ್ಕೆ ಹೋಲಿಸಿದರೆ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ತೋರಿಸಿದೆ. ಪ್ರಸ್ತುತ, ಪಾಲಿಕೆ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ.
ತುಂಬಿರುವ ಎಲ್ಲಾ ಕೆರೆಗಳ ತೂಬುಗಳ ಬಳಿ ಹಾಗೂ ಕೆರೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಕೆರೆಗಳಿಗೆ ನೀರು ಹರಿಯುವ ಕಾಲುವೆಗಳಲ್ಲಿನ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತೆರವುಗೊಳಿಸಲು ಸಿಬ್ಬಂದಿಗಳನ್ನು ನಿಯೋಜಿಸಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಪ್ರೀತಿ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.