Amit Shah visits Pejawar temple

Amit Shah visits Pejawar temple

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಸಂತ್ ಕುಂಜ್‌ನಲ್ಲಿರುವ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲಕ್ಕೆ ಸೋಮವಾರ ಭೇಟಿ ನೀಡಿದರು. ಇಲ್ಲಿ 39ನೇ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. 

ಸಂಜೆ 4.30ರ ಸುಮಾರಿಗೆ ಗುರುಕುಲಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ವಿದ್ಯಾರ್ಥಿಗಳು ವೇದಮಂತ್ರಗಳ ಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ಡಾ. ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಅವರು ಅವರನ್ನು ಸ್ವಾಗತಿಸಿದರು. 

ಗುರುಕುಲದ ಬಳಿಕ ಶ್ರೀ ಕೃಷ್ಣಧಾಮಕ್ಕೆ ತೆರಳಿದ ಅಮಿತ್ ಶಾ, ಶ್ರೀ ಕೃಷ್ಣನ ದರ್ಶನ ಪಡೆದು ಪಂಚದೀಪಗಳನ್ನು ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸಂಸ್ಥಾನದ ಪಟ್ಟದ ದೇವರ ದರ್ಶನ ಮಾಡಿ, ಶ್ರೀ ವಿಶ್ವತೀರ್ಥ ಸಂಸ್ಮರಣ ಧ್ಯಾನಮಂದಿರದಲ್ಲಿರುವ ಪಾದುಕೆಗೆ ನಮಿಸಿದರು. 

ಬಳಿಕ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ ಅಮಿತ್ ಶಾ, ಫಲಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಸ್ವಾಮೀಜಿಯವರೊಂದಿಗೆ ಕೆಲಕಾಲ ಚರ್ಚೆ ನಡೆಸಿದ ಅವರು, ಬಳಿಕ ಶ್ರೀಪಾದರಿಂದ ಶಾಲು, ಪೇಟ ಹಾಗೂ ಹಾರ ಹಾಕಿಸಿಕೊಂಡರು. ಶ್ರೀಗಳು ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆ ನೀಡಿ ಅಮಿತ್ ಶಾ ಅವರನ್ನು ಆಶೀರ್ವದಿಸಿದರು. 

ಕಾರ್ಯಕ್ರಮದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್, ರಾಮ್ ವೀರ್ ಸಿಂಗ್ ಬಿಧೂರಿ, ಶಾಸಕರಾದ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.