ದುಬೈ ರಾಜಮನೆತನದ ಹಿರಿಯ ಮುಖಂಡ ಶೇಖ್ ಅಹ್ಮದ್ ಇನ್ನಿಲ್ಲ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ.. ದುಬೈನಲ್ಲಿ 10 ದಿನಗಳ ಶೋಕಾಚರಣೆ

ದುಬೈ ರಾಜಮನೆತನದ ಹಿರಿಯ ಮುಖಂಡ ಶೇಖ್ ಅಹ್ಮದ್ ಇನ್ನಿಲ್ಲ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ.. ದುಬೈನಲ್ಲಿ 10 ದಿನಗಳ ಶೋಕಾಚರಣೆ

ನವದೆಹಲಿ / ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉಪಾಧ್ಯಕ್ಷ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಹೋದರ, ದುಬೈ ರಾಜಮನೆತನದ ಹಿರಿಯ ಸದಸ್ಯ ಶೇಖ್ ಅಹ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ (76) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. 

ಇನ್ನೂ ಅವರ ನಿಧನಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, "ಘನತೆವೆತ್ತ ಶೇಖ್ ಅಹ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ಸಮಾಜ ಸೇವೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಮುಂದಿನ ಪೀಳಿಗೆಗಳು ಸದಾ ಸ್ಮರಿಸಲಿವೆ. ದುಬೈ ರಾಜಮನೆತನ ಹಾಗೂ ದುಬೈ ಜನತೆಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪ್ರಾರ್ಥಿಸಿದ್ದಾರೆ. 

ದುಬೈ ಪೊಲೀಸ್ ಮತ್ತು ಸಾರ್ವಜನಿಕ ಭದ್ರತಾ ವಿಭಾಗದ ಉಪ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದ ಶೇಖ್ ಅಹ್ಮದ್ ಅವರ ನಿಧನದ ಹಿನ್ನೆಲೆಯಲ್ಲಿ, ದುಬೈ ಆಡಳಿತವು ಅಧಿಕೃತವಾಗಿ 10 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಈ ಅವಧಿಯಲ್ಲಿ ದುಬೈನಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ. ಅವರ ನಿಧನಕ್ಕೆ ದುಬೈ ನಾಗರಿಕರು ಹಾಗೂ ಜಾಗತಿಕ ಗಣ್ಯರು ಕಂಬನಿ ಮಿಡಿದಿದ್ದಾರೆ.