ರಾಹುಲ್ ಗಾಂಧಿ, ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ ಆಂಧ್ರ ಸಿಎಂ ಸಹೋದರಿ ಶರ್ಮಿಳಾ

ರಾಹುಲ್ ಗಾಂಧಿ, ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ ಆಂಧ್ರ ಸಿಎಂ ಸಹೋದರಿ ಶರ್ಮಿಳಾ

ನವದೆಹಲಿ: ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್ ಶರ್ಮಿಳಾ ಅವರು ಇಂದು (ಜನವರಿ 4) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಇಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 

 

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ವೈ.ಎಸ್.ಶರ್ಮಿಳಾ ಅವರು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರ ಪುತ್ರಿ ಹಾಗೂ ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿ ಆಗಿದ್ದಾರೆ. ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶರ್ಮಿಳಾ ಬೆಂಬಲ ನೀಡಿದ್ದರು. 

ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ‘ವೈಎಸ್‌ಆರ್ ತೆಲಂಗಾಣ ಪಕ್ಷನ್ನು ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ವೈಎಸ್ಆರ್ ತೆಲಂಗಾಣ ಪಕ್ಷವು ಇಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಾಗುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಹೇಳಿದರು.