ಅದಾನಿಗೆ 60ರ ಸಂಭ್ರಮ: 60 ಸಾವಿರ ಕೋಟಿ ರೂ. ದೇಣಿಗೆ ಘೋಷಿಸಿದ ಏಷ್ಯಾದ ಸಿರಿವಂತ

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ನಿನ್ನೆ (ಶುಕ್ರವಾರ) 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬವು ಸಾಮಾಜಿಕ ಕೆಲಸ ಕಾರ್ಯಗಳಿಗೆ 60,000 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ದೇಣಿಗೆ ನೀಡುವ ವಾಗ್ದಾನ ಮಾಡಿದೆ.
ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಅದಾನಿ ಫೌಂಡೇಶನ್ ಈ ದೇಣಿಗೆಯನ್ನು ನಿರ್ವಹಿಸಲಿದೆ ಎಂದು ಸ್ವತಃ ಗೌತಮ್ ಅದಾನಿ ಗುರುವಾರ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದು ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲಿಯೇ ಪ್ರತಿಷ್ಠಾನವೊಂದಕ್ಕೆ ಮಾಡಿದ ಅತಿದೊಡ್ಡ ಹಣ ವರ್ಗಾವಣೆಯಾಗಿದೆ. ಈ ಬದ್ಧತೆಯು ನನ್ನ ತಂದೆ ಶಾಂತಿಲಾಲ್ ಅದಾನಿಯವರ ಜನ್ಮ ಶತಮಾನೋತ್ಸವ ವರ್ಷವನ್ನೂ ಗೌರವಿಸುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಶುಕ್ರವಾರ 60 ವರ್ಷಕ್ಕೆ ಕಾಲಿಡುತ್ತಿರುವ ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ ಈ ದೇಣಿಗೆಯ ಮೂಲಕ ಮಾರ್ಕ್ ಜುಕರ್‌ಬರ್ಗ್ ಮತ್ತು ವಾರೆನ್ ಬಫೆಟ್‌ರಂತಹ ಜಾಗತಿಕ ಬಿಲಿಯನೇರ್‌ಗಳ ಶ್ರೇಣಿಗೆ ಸೇರಲಿದ್ದಾರೆ. ಈಗಾಗಲೇ ಇವರು ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಲೋಕೋಪಕಾರಕ್ಕಾಗಿ ನೀಡುವುದಾಗಿ ತಿಳಿಸಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಸುಮಾರು 92 ಬಿಲಿಯನ್ ಡಾಲರ್ (7.2 ಲಕ್ಷ ಕೋಟಿ ರೂ.) ಆಸ್ತಿಯನ್ನು ಗೌತಮ್ ಅದಾನಿ ಹೊಂದಿದ್ದು, ವಿಶ್ವದಲ್ಲೇ 8ನೇ ಸ್ಥಾನದಲ್ಲಿದ್ದಾರೆ. ಅದಾನಿ ಈ ವರ್ಷ ತಮ್ಮ ಸಂಪತ್ತಿನ ಮೌಲ್ಯವನ್ನು 15 ಬಿಲಿಯನ್ ಡಾಲರ್ ಹೆಚ್ಚಿಸಿಕೊಂಡಿದ್ದು, ಜಾಗತಿಕವಾಗಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ಉದ್ಯಮಿಯಾಗಿದ್ದಾರೆ.