ಇನ್ಫೋಸಿಸ್‌ನ 32 ಸಾವಿರ ಕೋಟಿ ರೂ. ಜಿಎಸ್‌ಟಿ ಬಾಕಿ ನೋಟೀಸ್ ಹಿಂಪಡೆದ ರಾಜ್ಯ ಸರ್ಕಾರ

ಬೆಂಗಳೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್‌ಗೆ ನೀಡಿದ್ದ 32,403 ಕೋಟಿ ರೂಪಾಯಿಗಳ ಜಿಎಸ್‍ಟಿ ಡಿಮ್ಯಾಂಡ್ ನೋಟೀಸನ್ನು ವಾಪಸ್ ಪಡೆಯಲಾಗಿದ್ದು, ಸದ್ಯಕ್ಕೆ ಈ ದೈತ್ಯ ಕಂಪನಿ ನಿರಾಳವಾಗಿದೆ ಎಂದು ವರದಿಯಾಗಿದೆ.
ಈ ತೆರಿಗೆ ನೋಟೀಸ್ ನೀಡಿದ್ದ ಕರ್ನಾಟಕ ರಾಜ್ಯ ತೆರಿಗೆ ಅಧಿಕಾರಿಗಳು ನೋಟಿಸ್ ವಾಪಾಸು ಪಡೆದಿದ್ದು, ಕೇಂದ್ರೀಯ ಜಿಎಸ್‍ಟಿ ಗುಪ್ತಚರ ಏಜೆನ್ಸಿಗೆ ಪ್ರತಿಕ್ರಿಯೆ ನೀಡುವಂತೆ ಈ ತಂತ್ರಜ್ಞಾನ ಕಂಪನಿಗೆ ಸೂಚಿಸಲಾಗಿದೆ.
ರಾಜ್ಯ ಸರ್ಕಾರ, ತಾನು ನೀಡಿರುವ ಜಿಎಸ್ ಟಿ ನೋಟಿಸನ್ನು ಹಿಂಪಡೆದಿದೆ ಎಂದು ಖುದ್ದು ಇನ್ಫೋಸಿಸ್ ಸಂಸ್ಥೆಯೇ ಪ್ರಕಟಿಸಿದೆ. ರಾಜ್ಯ ಸರ್ಕಾರವು ನೋಟಿಸ್ ಹಿಂಪಡೆದಿರುವುದಾಗಿ ನೋಟಿಸ್ ನೀಡಿದೆ. 32,000 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪಗಳ ಬಗ್ಗೆ ಕೇಂದ್ರೀಯ ಜಿಎಸ್ ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶಕರಿಗೆ ನೀವು ವಿವರಣೆ ಕೊಡಬೇಕು ಎಂದು ತನಗೆ ಕಳುಹಿಸಿರುವ ಸೂಚನಾ ಪತ್ರದಲ್ಲಿ ರಾಜ್ಯ ಸರ್ಕಾರ ತಿಳಿಸಿದೆ ಎಂದು ಇನ್ಫೋಸಿಸ್ ಪ್ರಕಟಣೆ ನೀಡಿದೆ.
ಜುಲೈ 31ರಂದು ತೆರಿಗೆ ಅಧಿಕಾರಿಗಳು ಇನ್ಫೋಸಿಸ್ ವಿರುದ್ಧ ಜಿಎಸ್‍ಟಿ ತೆರಿಗೆ ಕಳ್ಳತನದ ಆರೋಪ ಹೊರಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. 2017ರಿಂದ 2022ರ ನಡುವೆ ಸಾಗರೋತ್ತರ ಶಾಖೆಗಳಿಂದ ಪಡೆದ ಸೇವೆಗಳಿಗೆ ತೆರಿಗೆ ನೀಡದೇ ವಂಚಿಸಲಾಗಿದೆ ಎಂದು ಆಪಾದಿಸಲಾಗಿತ್ತು. ಆದರೆ ಕಂಪನಿ ಇದನ್ನು ನಿರಾಕರಿಸಿತ್ತು. ಇಂಥ ಸೇವೆಗಳಿಗೆ ಜಿಎಸ್‍ಟಿಯಿಂದ ವಿನಾಯ್ತಿ ಇದೆ ಎಂದು ಪ್ರತಿಪಾದಿಸಿತ್ತು.