ಧಾರವಾಡ: ಬರ ಪರಿಹಾರ, ಸಹಾಯ ಧನವನ್ನು ಸಾಲಕ್ಕೆ ಜಮಾ ಮಾಡಿಕೊಂಡರೆ ಬ್ಯಾಂಕ್ ವಿರುದ್ಧ ಕಠಿಣ ಕ್ರಮ

ಧಾರವಾಡ: ಬರ ಪರಿಹಾರ, ಸಹಾಯ ಧನವನ್ನು ಸಾಲಕ್ಕೆ ಜಮಾ ಮಾಡಿಕೊಂಡರೆ ಬ್ಯಾಂಕ್ ವಿರುದ್ಧ ಕಠಿಣ ಕ್ರಮ

ಧಾರವಾಡ: ರಾಜ್ಯ ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯ ಧನ, ಸಾಮಾಜಿಕ ನೆರವು ಯೋಜನೆಯ ಸಹಾಯ ಧನವನ್ನು ರೈತರ ಒಪ್ಪಿಗೆ ಇಲ್ಲದೇ ಅವರ ಸಾಲದ ಖಾತೆಗೆ ಹಣ ಹೊಂದಾಣಿಕೆ ಮಾಡದಿರುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈಗಾಗಲೇ ಸಾಕಷ್ಟು ಬಾರಿ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ. ಆದಾಗ್ಯೂ ಕುಂದಗೋಳ, ನವಲಗುಂದ ಸೇರಿ ಕೆಲವು ಕಡೆ ಬ್ಯಾಂಕ್‌ಗಳು ಪರಿಹಾರ ಹಣವನ್ನು ರೈತರ ಸಾಲಕ್ಕೆ ಹೊಂದಿಸುತ್ತಿರುವ ಕುರಿತು ದೂರು, ವರದಿಗಳು ಬರುತ್ತಿವೆ. ಈ ವಿಷಯದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನ ಉಲ್ಲಂಘಿಸಿದರೆ ಅಂತಹ ಬ್ಯಾಂಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಮಿತಿಯ ಸಹ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, 2024 ರ ಮುಂಗಾರು ವಿಫಲವಾಗಿದ್ದರಿಂದ ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿ, ಸರ್ಕಾರದ ನಿಯಮಾವಳಿಗಳ ಪರಿಹಾರ ಹಣ, ಇತರ ಸೌಲಭ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಈಗ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗುತ್ತಿರುವುದರಿಂದ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆಗೆ ಸಿದ್ಧಗೊಳಿಸಬೇಕು, ಬೀಜ, ಗೊಬ್ಬರ ಖರೀದಿಸಬೇಕು. ಅವರ ನೆರವಿಗಾಗಿ ರಾಜ್ಯ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ನೇರವಾಗಿ ಬರ ಪರಿಹಾರ ಜಮೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ರೈತರಿಗೆ ಸರ್ಕಾರಗಳಿಂದ ನೀಡುವ ಸಹಾಯಧನ, ಸಬ್ಸಿಡಿ, ಬರ ಪರಿಹಾರ ಮುಂತಾದವುಗಳನ್ನು ರೈತರ ಬ್ಯಾಂಕ್ ಸಾಲದ ಖಾತೆಗೆ ಹೊಂದಾಣಿಕೆ ಮಾಡದಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಮಟ್ಟದ ಬ್ಯಾಂಕರ್ಸ್ ಕಮಿಟಿ ಸೂಚಿಸಿವೆ. ಈ ಕುರಿತು ಪತ್ರ ಸಹ ಹೊರಡಿಸಿವೆ. ಅದರಂತೆ ಧಾರವಾಡ ಜಿಲ್ಲಾಢಳಿತವು ಕಳೆದ ವರ್ಷ ಮತ್ತು ಈ ವರ್ಷದಲ್ಲಿ ಎರಡ್ಮೂರು ಸಲ, ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಜಿಲ್ಲೆಯ ಪ್ರತಿ ಬ್ಯಾಂಕ್ ಮುಖ್ಯಸ್ಥರಿಗೆ, ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

ರೈತರ ಸಹಮತ ಪಡೆಯದೇ ಅವರ ಬರ ಪರಿಹಾರದ ಹಣವನ್ನು ಅವರ ಸಾಲದ ಖಾತೆಗೆ ಜಮೆ ಮಾಡಿಕೊಂಡರೆ ಆಯಾ ಬ್ಯಾಂಕ್ ಮುಖ್ಯಸ್ಥರನ್ನು ಮತ್ತು ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಜವಾಬ್ದಾರರನ್ನಾಗಿಸಿ,‌ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ. ಬ್ಯಾಂಕ್‌ಗಳು ರೈತರಿಗೆ ಸಹಾಕರ ನೀಡಬೇಕು. ಬರಗಾಲದಿಂದ ನೊಂದಿರುವ ರೈತರಿಗೆ ಪ್ರಸಕ್ತ ಮುಂಗಾರು ಉತ್ತಮ ಫಸಲಿನ ಭರವಸೆ ಮೂಡಿಸಿದ್ದು, ರೈತ, ಕೃಷಿ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳು ಕೈ ಜೋಡಿಸಬೇಕು ಎಂದು ಅವರು ಹೇಳಿದ್ದಾರೆ.