ಧಾರವಾಡ ಜಿಲ್ಲೆಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ಡಿಸಿ

ಧಾರವಾಡ ಜಿಲ್ಲೆಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ಡಿಸಿ

ಧಾರವಾಡ: ಧಾರವಾಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಘಟಕ ಹಾಗೂ ಇತರ ಇಲಾಖೆಗಳಿಂದ ವಿವಿಧ ವಿಷಯಗಳಲ್ಲಿ ಕಳೆದ ಎರಡು ವರ್ಷದಲ್ಲಿ 20,181 ಜನರಿಗೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ನೀಡಲಾಗಿದ್ದು, ಯುವ ಸಮೂಹದಿಂದ ಉತ್ತಮ ಸ್ಪಂದನೆಯಿದ್ದು, ಉದ್ಯೋಗಾಕಾಂಕ್ಷಿಗಳ ನೋಂದಾಯಿತ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾ ಕೌಶಲ್ಯ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಅಗತ್ಯವಿರುವ ಜನರಿಗೆ ಕೌಶಲ್ಯ ತರಬೇತಿ, ಉದ್ಯೋಗ ನೀಡಲು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಉಪಸಮಿತಿಗಳಿಗೆ ಮುಖ್ಯಸ್ಥರಾಗಿರುವ ಅಧಿಕಾರಿಗಳು ಆದ್ಯತೆ ನೀಡಿ, ಸಮಿತಿ ಕಾರ್ಯಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಈ ಕುರಿತ ಕ್ರಿಯಾಯೋಜನೆ, ವರದಿಗಳನ್ನು ಜಿಲ್ಲಾ ಕೌಶಲ್ಯ ಸಮಿತಿಗೆ ಎರಡು ವಾರದಲ್ಲಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. 

ಮುಖ್ಯಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ 5,085 ಮತ್ತು ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ 654, ಆರೋಗ್ಯ ಕ್ಷೇತ್ರದಲ್ಲಿ 270 ಸೇರಿ 6009 ಜನರಿಗೆ ಹಾಗೂ ಕೈಮಗ್ಗ ಜವಳಿ, ಎಟಿಡಿಸಿ, ಜಿಟಿಟಿಸಿ, ಲೀಡಕರ್, ಮಹಿಳಾ ಮಕ್ಕಳ ಇಲಾಖೆ, ರುಡಸೆಟ್, ಸಿಡಾಕ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಡಢ-ನಲ್ಮ್ ಯೋಜನೆಯಡಿ 14,172 ಜನರಿಗೆ ಕೌಶಲ್ಯ ಅಭಿವೃದ್ಧಿಗಾಗಿ ಜಿಲ್ಲೆಯ ಒಟ್ಟು 20,181 ಜನರಿಗೆ 39 ವಿಷಯಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರವಣಕುಮಾರ, ಸಿಡಾಕ್‌ನ ಮೌನೇಶ ಬಡಿಗೇರ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಸ್.ಲಕ್ಷ್ಮೀಪತಿ, ಕೆಎಂಡಿಸಿ ಅಧಿಕಾರಿ ಮೆಘಾ ನವಲೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ.ಬದ್ರಣ್ಣವರ ಸೇರಿದಂತೆ ಇತರರು ಸಭೆಯಲ್ಲಿದ್ದರು.