ಮಹಾರಾಷ್ಟ್ರದಲ್ಲಿ ಭೀಕರ ಬಸ್ ದುರಂತ - ಅಗ್ನಿ ಅನಾಹುತಕ್ಕೆ 25 ಜನರ ಸಜೀವ ದಹನ

ಮಹಾರಾಷ್ಟ್ರದಲ್ಲಿ ಭೀಕರ ಬಸ್ ದುರಂತ - ಅಗ್ನಿ ಅನಾಹುತಕ್ಕೆ 25 ಜನರ ಸಜೀವ ದಹನ

ಮುಂಬೈ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಒಂದು ಅಗ್ನಿಗೆ ಆಹುತಿಯಾಗಿದ್ದು, 25 ಮಂದಿ ಸಜೀವ ದಹನಗೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿರುವ ಬಸ್ ಯವತ್ಮಾಲ್ನಿಂದ ಪುಣೆಗೆ ತೆರಳುತ್ತಿತ್ತು. ಈ ಘಟನೆ ತಡರಾತ್ರಿ 2 ಗಂಟೆಗೆ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. 

ಬುಲ್ಧಾನ ಜಿಲ್ಲೆಯ ಡೆಪ್ಯುಟಿ ಎಸ್ಪಿ ಬಾಬುರಾವ್ ಮಹಾಮುನಿ ಮಾತನಾಡಿ, 25 ಶವಗಳನ್ನು ಬಸ್ನಿಂದ ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು. 6-8 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಬಸ್ ಚಾಲಕ ಅವಘಡದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಟೈರ್ ಸ್ಫೋಟಗೊಂಡು ಬಸ್ ಪಲ್ಟಿಯಾಗಿ ಹೊತ್ತಿ ಉರಿದಿದೆ ಎಂದು ಬುಲ್ಧಾನ ಎಸ್ಪಿ ಸುನೀಲ್ ಕಡಸಾನೆ ಹೇಳಿದ್ದಾರೆ.