ಬೆಂಗಳೂರು : ಶೀಘ್ರವೇ ನಿಗಮ ಮಂಡಳಿಗಳ ನೇಮಕಾತಿಗಾಗಿ ಕಾಂಗ್ರೆಸ್ ವರಿಷ್ಠರಿಗೆ ಸಿಎಂ ಪ್ರಸ್ತಾವನೆ

ಬೆಂಗಳೂರು : ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಗತಿಸಿದರೂ ಕೂಡ ನೆನೆಗುದಿಗೆ ಬಿದ್ದ ನಿಗಮ ಮಂಡಳಿಗಳಿಗೆ ನೇಮಕಾತಿ ಯಾವಾಗ? ಅನ್ನೋ ಪ್ರಶ್ನೆಗೆ ಸ್ವತಃ ಸಿಎಂ ಆದಷ್ಟು ಶೀಘ್ರವೇ ಎಂಬ ಮಾತನ್ನಾಡಿದ್ದಾರೆಂದು ಮುಖ್ಯಮಂತ್ರಿಯವರ ಆಪ್ತ ಮೂಲಗಳು ತಿಳಿಸಿವೆ.
ಈ ಮಾತಿಗೆ ಪುಷ್ಟಿ ಎಂಬಂತೆ ಕಾಂಗ್ರೆಸ್ ಕಾರ್ಯಕಾರಣಿ ಸಭೆಗೆಂದು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಒಂದು ಸಣ್ಣ ಗ್ಯಾಪ್‌ನಲ್ಲೇ ನಿಗಮ ಮಂಡಳಿಗಳಿಗೆ ಪಕ್ಷದ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಬೇಕಿದೆ. ಅದಕ್ಕೆ ತಾವು ಒಪ್ಪಿಗೆ ನೀಡಬೇಕೆಂಬ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್‌ನಲ್ಲಿ ನಿಗಮ ಮಂಡಳಿಗಳಿಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಎಲ್ಲರನ್ನು ತೃಪ್ತಿಪಡಿಸೋದಾಗಲಿ ಅಥವಾ ಎಲ್ಲರನ್ನು ಸಾರಾಸಗಟಾಗಿ ತಿರಸ್ಕರಿಸೋದಾಗಲಿ ಕಷ್ಟದ ಕೆಲಸವಾಗಿದೆ.
ಆದುದರಿಂದ ಎಪ್ಪತ್ತಕ್ಕೂ ಅಧಿಕವಿರುವ ರಾಜ್ಯದ ನಿಗಮ ಮಂಡಳಿಗಳಿಗೆ ಆದಷ್ಟು ಶಾಸಕರನ್ನು ಹೊರತುಪಡಿಸಿ ಪಕ್ಷಕ್ಕಾಗಿ ದುಡಿದಂಥವರಿಗೆ ಆದ್ಯತೆ ನೀಡಬೇಕು. ಕನಿಷ್ಟ ಪಕ್ಷ ಶೇ.50:50ರ ಅನುಪಾತದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳಿಗೆ ನೇಮಕಾತಿಯಾಗಬೇಕು. ಹೀಗೆ ನೇಮಕವಾದವರಿಗೆ ಮೂವತ್ತು ತಿಂಗಳ ಕಾಲಾವಕಾಶ ನೀಡಬೇಕು. ಬಳಿಕ ಮತ್ತಷ್ಟು ಅರ್ಹರಿಗೆ ಮಣೆ ಹಾಕಬೇಕು ಅಂತಾ ಕಾಂಗ್ರೆಸ್ ವರಿಷ್ಠರಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಮುಂಬರುವ ಲೋಕಸಭೆ ಚುನಾವಣೆ, ಬಿಬಿಎಂಪಿ, ಜಿ.ಪಂ.ತಾ.ಪಂ.ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಬೇಕಿದ್ದು, ಆದಷ್ಟು ಬೇಗನೇ ಖಾಲಿ ಇರುವ ನಿಗಮ ಮಂಡಳಿಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಬೇಕೆಂದು ಮುಖ್ಯಮಂತ್ರಿ ತಮ್ಮ ವರಿಷ್ಠರಿಗೆ ಮನವರಿಕೆ ಮಾಡಿ ಬಂದಿದ್ದಾರೆ ಅಂತಾ ಕಾಂಗ್ರೆಸ್ ಮೂಲಗಳು ತಿಳಿಸಿವೆ.