ಪೋಪ್ ಫ್ರಾನ್ಸಿಸ್ ಭೇಟಿಯಾದ ಪ್ರಧಾನಿ ಮೋದಿ: ಭಾರತಕ್ಕೆ ಬರಲು ಆಹ್ವಾನ

ವ್ಯಾಟಿಕನ್ ಸಿಟಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರೋಮ್‌ಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ. ಕೆಲ ಹೊತ್ತು ಪೋಪ್ ಜತೆಗೆ ಮಾತುಕತೆ ನಡೆಸಿ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಪೋಪ್ ಫ್ರಾನ್ಸಿಸ್ ಮತ್ತು ಪ್ರಧಾನಿ ಮೋದಿ ಜೊತೆ 20 ನಿಮಿಷ ಮಾತುಕತೆ ನಿಗದಿಯಾಗಿತ್ತು. ಆದರೆ ಇವರಿಬ್ಬರು ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ಮಾಡಿದ್ದಾರೆ. ಪ್ರಮುಖವಾಗಿ ಕೋವಿಡ್-19, ಹವಾಮಾನ ವೈಪರೀತ್ಯ, ಬಡತನ ನಿರ್ಮೂಲನೆ ಸೇರಿದಂತೆ ಹಲವು ಮಹತ್ವದ ವಿಚಾರ ಚರ್ಚೆಗೆ ಬಂದಿತ್ತು ಎಂದು ಮೂಲಗಳಿಂದ ವರದಿಯಾಗಿದೆ. ಚರ್ಚೆ ವೇಳೆ ಮೋದಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್, ವಿದೇಶಾಂಗ ಸಚಿವರಾದ ಡಾ. ಎಸ್ ಜೈಶಂಕರ್ ಜೊತೆಗಿದ್ದರು.