ನಟೋರಿಯಸ್ 'ನಶೆ ಗ್ಯಾಂಗ್' ಅರೆಸ್ಟ್: ಒಂದು ಗ್ರಾಂ ಹೆರಾಯಿನ್‌ಗೆ ₹25 ಸಾವಿರ!
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಲು ಪೊಲೀಸರು ನಿರಂತರ ಪ್ರಯತ್ನದಲ್ಲೇ ಇದ್ದಾರೆ. ಈ ನಡುವೆ ನಶೆ ಗ್ಯಾಂಗ್ ಮತ್ತೆ ಹೆಡೆ ಬಿಚ್ಚಿದಂತೆ ಕಾಣುತ್ತಿದೆ. ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಹೆಚ್ಚಾಯ್ತು ಮಾದಕ ವಸ್ತುಗಳಿಗೆ ಡಿಮ್ಯಾಂಡ್ ಹಾಗೂ ಮಾರಾಟ ಒಳಗೊಳಗೆ ನಡೆಯುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ವಿದೇಶಿಗರನ್ನು ಒಳಗೊಂಡಂತೆ ಒಂದು ಗ್ಯಾಂಗ್ಅನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನದಲ್ಲಿ ಅಂತರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲ ಹೊಸ ವರ್ಷದ ಆಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಈ ಆರೋಪಿಗಳು ವ್ಯವಸ್ಥಿತ ಹೊಂಚು ಹಾಕಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ನಶೆ ಗ್ಯಾಂಗ್ ಹಾಗೂ ಮಾರಾಟ ಜಾಲವನ್ನು ಪತ್ತೆ ಮಾಡಲು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ರಚನೆಯಾಗಿದ್ದ ಸ್ಪೆಷಲ್ ಟೀಂ ಈ ಕಾರ್ಯಾಚರಣೆ ನಡೆಸಿದೆ. ಈ ತಂಡವು ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನು ಒಳಗೊಂಡಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಂಡ ಮಾದಕವಸ್ತು ಹೆರಾಯಿನ್ ಮಾರಾಟ ಮಾಡಲು ಯತ್ನಿಸ್ತಿದ್ದ ಮೊಯಿನ್ ಅಲಾಂ, ಮೊಹದ್ ಸಯಿದುರ್, ವಾಕೀಮ್ ಯೂನಸ್ ಎಂಬಾತರನ್ನು ಬಂಧಿಸಿದ್ದಾರೆ. ಬಂಧಿತರು ಮಣಿಪುರಿ ಪೆಡ್ಲರ್‌ಗಳು ಎನ್ನಲಾಗಿದೆ. ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 111 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಅಚ್ಚರಿ ಎಂದರೆ ಈ ಗ್ಯಾಂಗ್, ಒಂದು ಗ್ರಾಂ ಹೆರಾಯಿನ್‌ಗೆ ಇಪ್ಪತ್ತರಿಂದ ಇಪ್ಪತೈದು ಸಾವಿರಕ ನಿಗದಿ ಮಾಡಿ ಮಾರಾಟ ಮಾಡುತ್ತಿತ್ತು. ಈ ಮಣಿಪುರಿ ಗ್ಯಾಂಗ್ ವಿರುದ್ಧ ಕೋಣನಕುಂಟೆ ಠಾಣೆಯಲ್ಲ ಪ್ರಕರಣ ದಾಖಲಾಗಿದೆ. ವಿದೇಶಿ ಪ್ರಜೆ ಬಂಧನ: ಬೆಂಗಳೂರಿನ ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಡ್ರಗ್ ಪೆಡ್ ಆರೋಪದಲ್ಲಿ ನೈಜೀರಿಯಾ ಮೂಲದ ಡೊಲೊಬಥ್ಲೆಮಿ ಎಂಬಾತನನ್ನು ಬಂಧಿಸಿದ್ದಾರೆ. ಈತ ನಗರದ HRBR ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಪೂರ್ವ ವಿಭಾಗದಲ್ಲಿ ವಾಸವಿದ್ದು ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಈತ ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಬಂಧಿತನಿಂದ 1.30 ಲಕ್ಷ ಮೌಲ್ಯದ 20 ಗ್ರಾಂ ಎಂಡಿಎಂಎ ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆದು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ.. ಗಂಟಲ ಶಸ್ತ್ರಚಿಕಿತ್ಸೆಗೆಂದು ಮೆಡಿಕಲ್ ವೀಸಾ ಪಡೆದು ಬೆಂಗಳೂರಿಗೆ ಬಂದು ಡ್ರಗ್ ಪೆಡ್ಲಿಂಗ್ ಮಾಡುತ್ತಿರುವ ಆರೋಪದ ಮೇರೆಗೆ ನೈಜೀರಿಯಾ ಮೂಲದ ಪ್ರಿನ್ಸ್ ಅನಿ ಚಿಡೋಜಿ ಎಂಬಾತನನ್ನು ಬಂಧಿಸಲಾಗಿದೆ. ಗಂಟಲ ಚಿಕಿತ್ಸೆಗೆಂದು ಮೆಡಿಕಲ್ ವೀಸಾದಡಿ ಬಂದಿದ್ದ ಆರೋಪಿ ಬೆಂಗಳೂರಿನಲ್ಲಿ ಡ್ರಗ್ಸ್ ಸರಬರಾಜು ಮಾಡ್ತಿದ್ದ. ಈತನೊಂದಿಗೆ ಮತ್ತೋರ್ವ ಆರೋಪಿ ಫೊಫಾನ ಅಹಮದ್ ಬಿಜಿನೆಸ್ ವೀಸಾಡಿ ಈತ ಭಾರತಕ್ಕೆ ಬಂದಿದ್ದ. ವೀಸಾ ಅವಧಿ ಮುಕ್ತಾಯವಾಗಿದ್ದರೂ ಅಕ್ರಮವಾಗಿ ವಾಸವಿದ್ದು ಡ್ರಗ್ಸ್ ಪೆಡ್ಲರ್ ಆಗಿದ್ದ. ಇವರು ಕಾಲೇಜು ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ ಸಿಂಥೆಟಿಕ್ ಡ್ರಗ್ ಸಪ್ಲೈ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಈ ಇಬ್ಬರೂ ಬಂಧಿತರಿಂದ 1.80 ಲಕ್ಷ ಮೌಲ್ಯದ ಎಂಡಿಎಂಎ ಸಿಂಥೆಟಿಕ್ ಡ್ರಗ್, 7 ಸಾವಿರ ನಗದು ಹಣ 1 ಮೊಬೈಲ್ 1 ಬೈಕ್ ವಶಕ್ಕೆ ಪಡೆಯಲಾಗಿದೆ.