ಹೈಕೋರ್ಟ್ ಆದೇಶದಂತೆ KERCಯಿಂದ ವಿದ್ಯುತ್ ದರ ಏರಿಕೆ - ಸಚಿವ ಕೆ ಜೆ ಜಾರ್ಜ್

ಹೈಕೋರ್ಟ್ ಆದೇಶದಂತೆ KERCಯಿಂದ ವಿದ್ಯುತ್ ದರ ಏರಿಕೆ - ಸಚಿವ ಕೆ ಜೆ ಜಾರ್ಜ್

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್‌ 2024ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಆದೇಶದ ಮೇರೆಗೆ ಕೆಇಆರ್‌ಸಿ ದರ ಹೆಚ್ಚಳದ ಆದೇಶ ಹೊರಡಿಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. 

ವಿಧಾನಸೌಧದಲ್ಲಿ ವಿದ್ಯುತ್ ದರ ಹೆಚ್ಚಳದ ಕುರಿತು ಮಾತನಾಡಿದ ಅವರು, ನಮ್ಮ ಸರ್ಕಾರ ವಿದ್ಯುತ್‌ ದರವನ್ನು ಏರಿಸಿಲ್ಲ. ಯೂನಿಟ್‌ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್‌ ದರದ ಏರಿಕೆ ಅಲ್ಲ. ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಹೈಕೋರ್ಟ್‌ ಆದೇಶದ ಮೇರೆಗೆ ಕೆಇಆರ್‌ಸಿ ಈ ಆದೇಶ ಹೊರಡಿಸಿದೆ. ಅದರಂತೆ, 2025-26ರ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆಯನ್ನು ಏರಿಸಿದೆ. ಎಂದು‌ ಸ್ಪಷ್ಟಪಡಿಸಿದರು. 

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ)ಯನ್ನು ರದ್ದುಗೊಳಿಸಿ ಕೆಪಿಟಿಸಿಎಲ್ ‌ಹಾಗೂ 5 ಎಸ್ಕಾಂಗಳನ್ನು ರಚಿಸಿದ ನಂತರ 2022ರ ಮಾರ್ಚ್‌ನಲ್ಲಿ ಕೆಇಆರ್‌ಸಿ ಮುಂದೆ ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹಕರಿಂದ ಪಡೆಯಲು ಆದೇಶಿಸುವಂತೆ ಅಂದಿನ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ಕೆಇಆರ್‌ಸಿ ಪ್ರಸ್ತಾವನೆಯನ್ನು ಪುರಸ್ಕರಿಸಿರಲಿಲ್ಲ. ಇದೀಗ ಹೈಕೋರ್ಟ್‌ ಆದೇಶದ ಮೇರೆಗೆ ಕೆಇಆರ್‌ಸಿ ಹೊಸ ಆದೇಶ ಹೊರಡಿಸಿದೆ ಎಂದು ಇಂಧನ ಸಚಿವರು ಹೇಳಿದರು. 

ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹರಕರಿಂದ ಪಡೆಯುವ ಪ್ರಸ್ತಾವನೆಯನ್ನು ಪ್ರಶ್ನಿಸಿ ಎಫ್‌ಕೆಸಿಸಿಐ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಹೈಕೋರ್ಟ್‌ 2024ರ ಮಾರ್ಚ್‌ 25ರಂದು ತಿರಸ್ಕರಿಸಿತ್ತು. ಹೈಕೋರ್ಟ್‌ ಆದೇಶವನ್ನು ಮುಂದಿಟ್ಟುಕೊಂಡು 2024ರ ನವೆಂಬರ್‌ 30ರಂದು ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು ಮತ್ತೆ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಪುರಸ್ಕರಿಸಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್‌ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯ ಪಾಲನ್ನು ಗ್ರಾಹಕರಿಂದ ಪಡೆಯಲು ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಇದರ ಆಧಾರದ ಮೇಲೆ ಮತ್ತು ಹೈಕೋರ್ಟ್‌ ಆದೇಶದಂತೆ ಕೆಇಆರ್‌ಸಿ ದರ ಹೆಚ್ಚಳ ಮಾಡಿದೆ ಎಂದು ತಿಳಿಸಿದರು.