ತುಮಕೂರು : ಅನಿಲ ಸಂಪರ್ಕ ಗ್ರಾಹಕರಿಗೆ ಇ- ಕೆವೈಸಿ ಕಡ್ಡಾಯ

ತುಮಕೂರು : ಕೇಂದ್ರ ಸರ್ಕಾರ ಸ್ವಾಮ್ಯದ ಐ.ಓ.ಸಿ. ಬಿ.ಪಿ.ಸಿ., ಮತ್ತು ಹೆಚ್.ಪಿ.ಸಿ. ಕಂಪನಿಗಳಿಂದ ಲೈಸೆನ್ಸ್ ಪಡೆದಿರುವ ಗ್ಯಾಸ್ ಏಜೆನ್ಸಿಗಳಲ್ಲಿ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಇ-ಕೆವೈಸಿ ಮಾಡಿಸುವುದು ಕಡ್ಡಾಯ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ತಿಳಿಸಿದ್ದಾರೆ.
ಅನಿಲ ಸಂಪರ್ಕ ಹೊಂದಿರುವ ಗ್ರಾಹಕರ ನೈಜತೆಯನ್ನು ಪರಿಶೀಲಿಸಿ, ಅರ್ಹರಲ್ಲದವರನ್ನು ಕೈಬಿಡುವ ಉದ್ದೇಶದಿಂದ ಅನಿಲ ಸಂಪರ್ಕ ಗ್ರಾಹಕರ ಇ-ಕೆವೈಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇ-ಕೆವೈಸಿಯನ್ನು ಆಧಾರ್ ಆಧಾರಿತ ಬೆರಳಚ್ಚು ಮತ್ತು ಫೇಸ್ ಆರ್.ಡಿ. ಮೂಲಕ ಮಾಡಲಾಗುವುದು. ಸಾರ್ವಜನಿಕರು ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ತೆರಳಿ ಇ-ಕೆವೈಸಿ ಮಾಡಿಸಬಹುದು ಅಥವಾ ಭರ್ತಿ ಸಿಲಿಂಡರ್ ನೀಡಲು ಬರುವ ಡೆಲಿವರಿ ಹುಡುಗರ ಬಳಿಯೂ ಸಹ ಇ-ಕೆವೈಸಿ ಮಾಡಿಸಬಹುದು.
ಇ-ಕೆವೈಸಿ ಮಾಡಿಸಲು ಇದುವರೆಗೂ ಯಾವುದೇ ಕಾಲಬದ್ಧ ಮಿತಿಯನ್ನು ವಿಧಿಸಿರುವುದಿಲ್ಲ. ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಅನಿಲ ಸಂಪರ್ಕ ಗ್ರಾಹಕತ್ವದ ತಮ್ಮ ನೈಜತೆಯನ್ನು ಸಾಬೀತುಪಡಿಸಲು ಸೂಚಿಸಲಾಗಿದೆ.
ಒಂದು ವೇಳೆ ತಮಗೆ ಸದರಿ ವಿಷಯದ ಸಂಬಂಧ ಯಾವುದಾದರೂ ಗೊಂದಲ ಇದ್ದಲ್ಲಿ ಮತ್ತು ಮಾಹಿತಿ ಕೊರತೆ ಇದ್ದಲ್ಲಿ ಸಂಬಂಧಿಸಿದ ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಅವರು ಸೂಚಿಸಿದ್ದಾರೆ.