ಕರ್ನಾಟಕ ಬಂದ್‌ಗೆ ಕರವೇ ಬೆಂಬಲ ಇಲ್ಲ: ನಾರಾಯಣಗೌಡ

ಬೆಳಗಾವಿ: ಗಡಿಯಲ್ಲಿ ಎಂಇಎಸ್ ಪುಂಡಾಟಿಕೆ ಹಾಗೂ ಶಿವಸೇನೆ ಉಪಟಳ ಖಂಡಿಸಿ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಬಲವಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, 'ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಈ ಬಗೆಯ ದಿಢೀರ್ ಬಂದ್ ಕರೆಗಳಿಂದ ದೂರ ಉಳಿಯುತ್ತಾ ಬಂದಿದೆ. ಬಂದ್ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ, ಅದೊಂದೇ ಚಳವಳಿಯ ಮಾರ್ಗವಲ್ಲ. ಬಂದ್ ಚಳವಳಿಯ ಕೊನೆಯ ಅಸ್ತ್ರವಾಗಬೇಕು ಎಂಬುದು ನಮ್ಮ ನಿಲುವು. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ರಾಜ್ಯದ ಜನರು ನೊಂದು ನಲುಗಿದ್ದಾರೆ. ಸರ್ಕಾರವೇ ನೂರಾರು ದಿನಗಳ ಲಾಕ್ ಡೌನ್ ಹೇರಿದ ಪರಿಣಾಮವಾಗಿ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಎಷ್ಟು ಸರಿ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.