ಭಾರತದ ಉಕ್ಕಿನ ಮನುಷ್ಯರೆಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ ಇರಾನಿ ನಿಧನ

ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ, ಹಾಗೂ ಇರಾನಿ ಟಾಟಾ ಸ್ಟೀಲ್ ಸಂಸ್ಥೆಯ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಜಮ್ಶೆಡ್ ಜೆ ಇರಾನಿ ಅವರು ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ತಿಳಿಸಿದೆ.
ಇರಾನಿಯವರು 2011ರಲ್ಲಿ ಟಾಟಾ ಸ್ಟೀಲ್ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಿಂದ ನಿವೃತ್ತರಾಗಿದ್ದರು. ಟಾಟಾ ಸ್ಟೀಲ್ ಕಂಪೆನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ಜಮ್ಶೆಡ್ ಇರಾನಿ 43 ವರ್ಷಗಳ ಕಾಲ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು. 1936ರಲ್ಲಿ ಜೂನ್ 2ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಇವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.