15 ಸಾವಿರ ಸಿಬ್ಬಂದಿ ಕಡಿತಕ್ಕೆ ಮುಂದಾದ ಇಂಟೆಲ್ ಕಂಪನಿ

ವಾಷಿಂಗ್ಟನ್: ಅಮೆರಿಕದ ಎಲೆಕ್ಟ್ರಾನಿಕ್ ಚಿಪ್ ತಯಾರಿಕಾ ಕಂಪನಿ ಇಂಟೆಲ್, ಮುಂಬರುವ ದಿನಗಳಲ್ಲಿ ಜಾಗತಿಕವಾಗಿ 15 ಸಾವಿರ ಸಿಬ್ಬಂದಿ ವಜಾಗೊಳಿಸಲು ನಿರ್ಧರಿಸಿದೆ. ಹಣವನ್ನು ಉಳಿಸುವ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಇಂಟೆಲ್ ಭಾರಿ ಸಂಖ್ಯೆಯ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
ಇಂಟೆಲ್ ಸಿಇಒ ಪ್ಯಾಟ್ ಗೆಲ್ಸಿಂಗರ್ ಎಲ್ಲಾ ಉದ್ಯೋಗಿಗಳಿಗೆ ಕಾರಣಗಳನ್ನು ಬಹಿರಂಗಪಡಿಸಿ ಮೆಮೋ ಕಳುಹಿಸಿದ್ದಾರೆ. 2025ರ ವೇಳೆಗೆ ಕಂಪನಿಯು 10 ಬಿಲಿಯನ್ ಡಾಲರ್ ಉಳಿತಾಯವನ್ನು ತಲುಪಿಸಲು ಯೋಜಿಸಿದೆ ಎಂದು ಇಂಟೆಲ್ ಸಿಇಒ ಪ್ಯಾಟ್ ಗೆಲ್ಸಿಂಗರ್ ಮೆಮೋದಲ್ಲಿ ಬಹಿರಂಗಪಡಿಸಿದ್ದಾರೆ.
"ಇದು ನನಗೆ ಹಂಚಿಕೊಳ್ಳಲು ನೋವಿನ ಸುದ್ದಿ. ನಿಮಗೆ ಓದಲು ಇನ್ನೂ ಕಷ್ಟವಾಗುತ್ತದೆ ಎಂದು ನನಗೆ ತಿಳಿದಿದೆ. ಇದು ಇಂಟೆಲ್ಗೆ ನಂಬಲಾಗದಷ್ಟು ಕಠಿಣ ದಿನವಾಗಿದೆ, ಏಕೆಂದರೆ ನಾವು ನಮ್ಮ ಕಂಪನಿಯ ಇತಿಹಾಸದಲ್ಲಿ ಅತ್ಯಂತ ಪರಿಣಾಮಾತ್ಮಕ ಬದಲಾವಣೆಗಳನ್ನು ಮಾಡುತ್ತಿದ್ದೇವೆ" ಎಂದು ಗೆಲ್ಸಿಂಗರ್ ಬರೆದಿದ್ದಾರೆ.
ಸದ್ಯ ಇಂಟೆಲ್ ಕಂಪನಿಯಲ್ಲಿ 1.24 ಲಕ್ಷ ಉದ್ಯೋಗಿಗಳಿದ್ದು, ಈ ಪೈಕಿ ಶೇ.15ರಷ್ಟು ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. ಅಂದರೆ ಸರಿ ಸುಮಾರು 15 ಸಾವಿರ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿ 13,401 ಕೋಟಿ ರೂಪಾಯಿ ನಷ್ಟ ದಾಖಲಿಸಿದೆ. ಇದರಿಂದ ಕಂಪನಿಯ ಒಟ್ಟಾರೆ ವೆಚ್ಚವನ್ನು ಕಡಿತಗೊಳಿಸಲು ಯೋಜಿಸಿರುವುದರಿಂದ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.