ಗುಜರಾತ್ ಗೇಮಿಂಗ್ ಝೋನ್‌ನಲ್ಲಿ ಭಾರೀ ಬೆಂಕಿ : 20 ಮಂದಿ ದುರ್ಮರಣ ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಗುಜರಾತ್ ಗೇಮಿಂಗ್ ಝೋನ್‌ನಲ್ಲಿ ಭಾರೀ ಬೆಂಕಿ : 20 ಮಂದಿ ದುರ್ಮರಣ ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ರಾಜ್ ಕೋಟ್ : ಗುಜರಾತ್‌ನ ರಾಜ್‌ ಕೋಟ್‌ ನಲ್ಲಿ ಗೇಮಿಂಗ್ ವಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 20 ಜನ ಸಾವನ್ನಪ್ಪಿದ್ದು, ಇನ್ನೂ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ಟಿಆರ್‌ಪಿ ಗೇಮ್ ಝೋನ್‌ ಸಂಪೂರ್ಣ ಅಗ್ನಿ ಜ್ವಾಲೆಯಲ್ಲಿ ಮುಳುಗಿದ ನಂತರ ಮಕ್ಕಳು ಸೇರಿದಂತೆ ಹಲವು ಜನರು ಸಿಕ್ಕಿಬಿದ್ದಿದ್ದಾರೆ. ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. 

ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ್ ಮಾತನಾಡಿ, ಹಲವಾರು ಜನರು ಒಳಗೆ ಸಿಲುಕಿರುವ ಶಂಕೆ ಇದೆ ಮತ್ತು ಬೆಂಕಿ ನಂದಿಸಿದ ನಂತರ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ. 

ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. 

ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದು ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ. ಗಾಳಿಯಿಂದಾಗಿ ಬೆಂಕಿ ನಂದಿಸುವ ಕಾರ್ಯ ಕಷ್ಟಕರವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.