ಸಿಎಂ ಇಬ್ರಾಹಿಂ ವಿರುದ್ಧ ಸಿಟ್ಟಿಗೆದ್ದ ಮಂಗಳಮುಖಿಯರಿಂದ ಪ್ರತಿಭಟನೆ

ಬೆಂಗಳೂರು: ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರುದ್ಧ ಮಂಗಳಮುಖಿಯರು ಸಿಡಿದೆದ್ದಿದ್ದಾರೆ. ಸ್ವಾತಂತ್ಯ್ರ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಮಂಗಳಮುಖಿಯರು ಇಬ್ರಾಹಿಂ ಮೇಲೆ ಆಕ್ರೋಶಿತರಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ, ದಲಿತ ಮತ್ತು ಮುಸ್ಲಿಂ ಮೈನಾರಿಟಿ ಸೇನೆ, ಸ್ವಾರಾಜ್ಯ ಇಂಡಿಯಾ, ದಿಲ್ ಫರಾಜ್ ಸಮರ ಸಂಸ್ಥೆ ಹಾಗೂ ಸಂವಾದ ಸಂಸ್ಥೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಮತ್ತು ಮುಸ್ಲಿಂ ಮೈನಾರಿಟಿ ಸೇನೆಯ ರಾಜ್ಯಾಧ್ಯಕ್ಷ ಎಜೆ ಖಾನ್, 'ಸಿಎಂ ಇಬ್ರಾಹಿಂ ಅವರು ದೇವೆಗೌಡರ ಕೃಪೆಯಿಂದ ಕೇಂದ್ರದಲ್ಲಿ ಸಚಿವರಾಗಿದ್ದವರು. ಅವರಿಗೆ ಎಲ್ಲಿ ಅಧಿಕಾರ ಸಿಗಲ್ಲವೋ ಅಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ. ಎರಡು-ಮೂರು ತಿಂಗಳ ಹಿಂದೆ ಅವರ ನಾಟಕವನ್ನು ನಾವು ನೋಡಿದ್ದೇವೆ. ಪ್ರತಿಭಟನೆಯ ಹೋರಾಟಗಾರರು ಸಿಎಂ ಇಬ್ರಾಹಿಂ ಅವರ ಪೋನ್‌ಗೆ, ‘ಫೋನ್ ಕಾಲ್ ಅಭಿಯಾನ’ವನ್ನು ಮಾಡಿದ್ದು, 200ಕ್ಕೂ ಹೆಚ್ಚು ಫೋನ್ ಕಾಲ್ ದಾಖಲಾಗಿದೆ. ಈ ವೇಳೆ ಹೋರಾಟಗಾರರ ಕರೆಯನ್ನು ಸ್ವೀಕರಿಸಿದ ಸಿಎಂ ಇಬ್ರಾಹಿಂ ಅವರು, “ನನ್ನ ಹೇಳಿಕೆ ತಪ್ಪಾಗಿದ್ದು, ಈ ಬಗ್ಗೆ ಬೇಷರತ್ತಾಗಿ ಕ್ಷಮೆ ಕೇಳಿ ವಿಡಿಯೊ ಬಿಡುತ್ತೇನೆ. ಲೈಂಗಿಕ ಅಲ್ಪಸಂಖ್ಯಾತರು ನನ್ನ ಸೋದರ-ಸೋದರಿಯರಿದ್ದ ಹಾಗೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.