ಬೆಂಗಳೂರು: ಪದೇ ಪದೇ ವಾಹನ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ನಾಶ.! - ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು: ರಾಜಧಾನಿಯಲ್ಲಿ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ. ಉಲ್ಲಂಘನೆ ಪ್ರಕರಣಗಳು ಹೆಚ್ಚಾದಂತೆ ನಿಮ್ಮ ವಾಹನ ಸೀಜ್ ಮಾಡೋಕೆ ಇಲಾಖೆ ಮುಂದಾಗಿದೆ. ಇಂತಹ ಪ್ರಸ್ತಾವನೆ ಸಾರಿಗೆಯ ಸಾರಿಗೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಸರ್ಕಾರಕ್ಕೆ ಸಲ್ಲಿಸಿದೆ. ಒಂದು ವೇಳೆ ಪ್ರಸ್ತಾವನೆಗೆ ಅಸ್ತು ಎಂದರೆ ನಿಮ್ಮ ವಾಹನವನ್ನು ಸಂಚಾರ ಪೊಲೀಸರು ಜಪ್ತಿ ಮಾಡಲಿದ್ದಾರೆ.
ನಿರಂತರವಾಗಿ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಉಲ್ಲಂಘಿಸದಂತೆ ಸತತ ಅರಿವು ಮೂಡಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಶೇಕಡಾ 50ರಷ್ಟು ದಂಡ ವಿನಾಯಿತಿಯನ್ನು ಎರಡು ಬಾರಿ ಅವಕಾಶ ನೀಡಿದರೂ ಪರಿಣಾಮಕಾರಿಯಾಗಿಲ್ಲ. ಮಧ್ಯೆ ಸಂಚಾರ ಪೊಲೀಸರು 50 ಸಾವಿರಕ್ಕಿಂತ ಹೆಚ್ಚು ದಂಡವಿರುವ ವಾಹನಗಳನ್ನ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಹೀಗಾದರೂ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ಪ್ರಮಾಣ ದಿನೇ ದಿನೇ ಅಧಿಕಗೊಳ್ಳುತ್ತಿವೆ. ಹೀಗಾಗಿ ವಾಹನ ಸವಾರರಿಗೆ ಕಡಿವಾಣ ಹಾಕಲು ಇಲಾಖೆಯು ಪದೇ ಪದೇ ಉಲ್ಲಂಘಿಸಿದ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾವನೆ ಸಲ್ಲಿಸಿದೆ. ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿದ್ದು ಸರ್ಕಾರ ಈ ಕಠಿಣ ನಿಯಮ ಓಕೆ ಅಂದರೆ ವಾಹನಗಳನ್ನ ನಾಶವಾಗೋದು ಗ್ಯಾರಂಟಿ.
ಹೆಚ್ಚೆಚ್ಚು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಕೆಲವೊಮ್ಮೆ ದಂಡ ಪಾವತಿಸುವವರೆಗೂ ವಾಹನಗಳನ್ನ ಜಪ್ತಿ ಮಾಡಿಕೊಳ್ಳುತ್ತಾರೆ.ಇದೀಗ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ವಾಹನಗಳನ್ನು ನಜ್ಜುಗೊಳಿಸುವ ಅಧಿಕಾರ ನೀಡುವಂತೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಮನವಿ ಮಾಡಿದೆ. ಬೆಂಗಳೂರು ನಗರದಲ್ಲಿ 10 ಹಾಗೂ ಇತರೆಡೆ 5 ಸಂಚಾರ ಉಲ್ಲಂಘನಾ ಪ್ರಕರಣಗಳು ದಾಖಲಾದರೆ ಜಪ್ತಿ ಮಾಡಿ ನಾಶಗೊಳಿಸಿ ಅಧಿಕಾರ ನೀಡುವಂತೆ ಪ್ರಸ್ತಾವನೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.