ಏಷ್ಯನ್ ಗೇಮ್ಸ್: ಪುರುಷರ ಕ್ರಿಕೆಟ್ ಪಂದ್ಯದಲ್ಲಿ ನೇಪಾಳದ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದ ಭಾರತ

19ನೇ ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡವು ನೇಪಾಳವನ್ನು 23 ರನ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ನೇಪಾಳ ತಂಡವು 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಭಾರತದ ಪರ ಯಶಸ್ವಿ ಜೈಸ್ವಾಲ್ 21ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇನ್ನು ಯುವ ಬೌಲರ್ ರವಿ ಬಿಷ್ಣೋಯ್ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದರು. ಅವರು 4 ಓವರ್ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತು 24 ರನ್ ಬಿಟ್ಟುಕೊಟ್ಟಿದ್ದಾರೆ. ಇದು ನೇಪಾಳ ವಿರುದ್ಧದ ಭಾರತದ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯವಾಗಿದೆ. ಅಷ್ಟೇ ಅಲ್ಲದೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮೊದಲ ಪುರುಷರ ಕ್ರಿಕೆಟ್ ಪಂದ್ಯವಾಗಿದೆ.