ಧಾರವಾಡ: ಬೆಳಿಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಕಿರಾಣಿ, ತರಕಾರಿ ವ್ಯಾಪಾರಕ್ಕೆ ಅವಕಾಶ, ಬಾರ್ ಗಳು ಬಂದ್

ಧಾರವಾಡ: ಧಾರವಾಡ ಜಿಲ್ಲಾಡಳಿತ ನಾಳೆಯಿಂದ 10 ದಿನಗಳ ಕಾಲ ಲಾಕಡೌನ್ ಮಾಡೊ ಆದೇಶ ಹೊರಡಿಸಿದ್ದು, ಪ್ರತಿದಿನ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಕಿರಾಣಿ, ತರಕಾರಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲಾಕಡೌನ್ ಸಂಬಂಧ ಮಾಹಿತಿ ನೀಡಿದ ಅವರು, ಜನರು ಪ್ಯಾನಿಕ್ ಆಗುವುದು ಬೇಡ ಎಂಬ ಉದ್ದೇಶದಿಂದ ಪ್ರತಿದಿನ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ರಿಂದ ಅಗತ್ಯ ವಸ್ತುಗಳಾದ ಕಿರಾಣಿ, ತರಕಾರಿ ಹಾಗೂ ಮಾಂಸ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಹೋಟೆಲ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ ಎಂದರು.
ಸರ್ಕಾರಿ ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಹತ್ತು ದಿನಗಳ ಈ ಲಾಕಡೌನ್ ಅವಧಿಯಲ್ಲಿ ತುರ್ತು ಹೊರ ಜಿಲ್ಲೆಗೆ ಹೋಗುವವರು ನಮ್ಮ ಗಮನಕ್ಕೆ ತಂದರೆ ಅವರಿಗೆ ಪರವಾನಿಗಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಜಿಲ್ಲೆಯ ಮುಖಾಂತರ ಬೇರೆ ಜಿಲ್ಲೆಗೆ ಹೋಗುವ ಸರ್ಕಾರಿ ಹಾಗೂ ಖಾಸಗಿ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮುಖಾಂತರ ಹಾಯ್ದು ಹೋಗಬಹುದು ಆದರೆ, ಆ ವಾಹನಗಳು ಪ್ರಯಾಣಿಕರನ್ನು ನಮ್ಮ ಜಿಲ್ಲೆಗೆ ಇಳಿಸುವಂತಿಲ್ಲ. ಸಾರ್ವಜನಿಕರೂ ಅಷ್ಟೇ ನಗರದ ಒಳಭಾಗದಿಂದ ಬೇರೆ ಜಿಲ್ಲೆಗೆ ಹೋಗುವಂತಿಲ್ಲ ಎಂದರು.
ಚಿತ್ರಮಂದಿರಗಳು, ಮಾಲ್ ಗಳು, ಜಿಮ್ ಗಳು, ಧಾರ್ಮಿಕ ಕೇಂದ್ರಗಳು ಸಾರಿಗೆ ಸಂಸ್ಥೆ ಬಸ್ಸುಗಳು, ಸೆಲ್ಯೂನ್ ಶಾಪ್ ಗಳು ಬಂದ್ ಇರಲಿವೆ ಎಂದರು.