ಹುಬ್ಬಳ್ಳಿ ಬ್ರೇಕಿಂಗ್: ಮಾರಕಾಸ್ತ್ರದಿಂದ ಹೊಡೆದು ರೌಡಿ ಶೀಟರ್ ಕೊಲೆ

ಹುಬ್ಬಳ್ಳಿ ಬ್ರೇಕಿಂಗ್: ಮಾರಕಾಸ್ತ್ರದಿಂದ ಹೊಡೆದು ರೌಡಿ ಶೀಟರ್ ಕೊಲೆ

ಹುಬ್ಬಳ್ಳಿ: ಇಷ್ಟು ದಿನ ತಣ್ಣಗಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು ಮಾರಾಕಾಸ್ತ್ರಗಳು ಸದ್ದು ಮಾಡುತ್ತಿವೆ. ದುಡ್ಡಿನ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರವಿಂದ್ ನಗರದ ಪಿಎನ್‌ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಎಂಬುವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಇವನು ಮೂಲ ರೌಡಿ ಶೀಟರ್ ಆಗಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಸದಾನಂದ ಕುರ್ಲಿ ಎಂಬುವ ವ್ಯಕ್ತಿ ಜೊತೆಗೆ ಹಣಕಾಸಿನ ವಿಷಯದಲ್ಲಿ ರಾತ್ರಿ ಗಲಾಟೆ ನಡೆದಿದ್ದು, ಇದೇ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ಅತಿರೇಕಕ್ಕೆ ಹೋಗಿದೆ. ಅಕ್ಬರ್ ಮುಲ್ಲಾ ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿದಾಗ ಸದಾನಂದ ಕುರ್ಲಿ ತಪ್ಪಿಸಿಕೊಂಡಿದ್ದಾನೆ. ಅದೇ ಆಯುಧದಿಂದ ಸದಾನಂದ, ಅಕ್ಬರ್‌ನ ತಲೆಗೆ ಬಲವಾಗಿ ಹೊಡಿದಿದ್ದಾನೆ. ಇದರಿಂದ ಸ್ಥಳದಲ್ಲಿ ಅಕ್ಬರ್ ಮೃತಪಟ್ಟಿದ್ದಾನೆ. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.