ಹುಬ್ಬಳ್ಳಿ: 128 ಕಳವು ಪ್ರಕರಣ ಪತ್ತೆ, ಶೇ. 41‌ರಷ್ಟು ಸೊತ್ತು ವಾಪಸ್: ಪೊಲೀಸ್ ಆಯುಕ್ತ ಲಾಭುರಾಮ್

ಹುಬ್ಬಳ್ಳಿ: 128 ಕಳವು ಪ್ರಕರಣ ಪತ್ತೆ, ಶೇ. 41‌ರಷ್ಟು ಸೊತ್ತು ವಾಪಸ್: ಪೊಲೀಸ್ ಆಯುಕ್ತ ಲಾಭುರಾಮ್

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈವರೆಗೆ ಒಟ್ಟು 312 ಕಳವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 128 ಪ್ರಕರಣಗಳನ್ನು ಭೇದಿಸಿ, 1.61 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮನೆ, ಅಂಗಡಿ, ವಾಹನ ಮತ್ತಿತರ 312 ಪ್ರಕರಣಗಳಲ್ಲಿ ಒಟ್ಟು 2.6 ಕೋಟಿ ರೂ. ಮೌಲ್ಯದ ನಗದು, ವಸ್ತು ಕಳ್ಳತನವಾಗಿತ್ತು. ಇದರಲ್ಲಿ 1.61 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಅಂದರೆ ಶೇ.41ರಷ್ಟು ಸ್ವತ್ತು ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಪ್ರಸಕ್ತ ವರ್ಷ 336 ಮಟ್ಕಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್, ಮತ್ತಿತರ ಜೂಜಾಟ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 194 ಜೂಜಾಟ ಪ್ರಕರಣಗಳು ದಾಖಲಾಗಿದ್ದವು ಎಂದು ಆಯುಕ್ತರು ತಿಳಿಸಿದ್ದಾರೆ.