ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ : ಹವಾಮಾನ ಇಲಾಖೆಯಿಂದ ಎಚ್ಚರ

ಬೆಂಗಳೂರು : ಈಗಾಗಲೇ ಮಹಾಮಳೆಯಿಂದ ಕಂಗೆಟ್ಟ ಬೆಂಗಳೂರಿಗೆ ಇನ್ನು ಭಾರಿ ಮಳೆಯಾಗಲಿದೆ ಎನ್ನುವ ಹವಾಮಾನ ಇಲಾಖೆ ಎಚ್ಚರಿಕೆ ಶಾಕ್ ಕೊಟ್ಟಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಮುಂದುವರೆದಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಹಾ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಸದ್ಯ ಬೆಂಗಳೂರಿನ ಕೆಲವೆಡೆ ಮಳೆ ಆರ್ಭಟ ಕೊಂಚ ಕಡಿಮೆಯಾಗಿದೇ ಎನ್ನುವಾಗಲೇ ಹವಾಮಾನ ಇಲಾಖೆ ಎರಡು ದಿನ ರಣಮಳೆಯಾಗುವ ಎಚ್ಚರಿಕೆ ನೀಡಿದ್ದು, ಸಿಲಿಕಾನ್ ಸಿಟಿ ಜನತೆಯನ್ನು ಮತ್ತೆ ಆತಂಕಕ್ಕೀಡುಮಾಡಿದೆ.ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಇಂದಿನಿಂದ ಮತ್ತೆ ಮಳೆಯಾಗಲಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ನಾಲ್ಕು ದಿನಗಳ ಕಾಲ ಧಾರಾಕಾರ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಲ್ಲದೇ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು, ಬಾಗಲಕೋಟೆ, ಗದಗ, ಕಲಬುರ್ಗಿ, ಹಾವೇರಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು, ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕೂಡ ಎರಡು ದಿನ ಮಳೆಯಾಗಲಿದ್ದು ಹಳದಿ ಅಲರ್ಟ್ ಘೋಷಿಸಲಾಗಿದೆ.