ಪಿಎಂ ಭೇಟಿ ಮಾಡಿ ಮಾಜಿ ಪ್ರಧಾನಿ ದೇವೇಗೌಡ ನಿಯೋಗ - ತೆಂಗು ಬೆಳೆಗಾರರಿಗೆ ನೆರವು ನೀಡುವಂತೆ ಮನವಿ

ಪಿಎಂ ಭೇಟಿ ಮಾಡಿ ಮಾಜಿ ಪ್ರಧಾನಿ ದೇವೇಗೌಡ ನಿಯೋಗ - ತೆಂಗು ಬೆಳೆಗಾರರಿಗೆ ನೆರವು ನೀಡುವಂತೆ ಮನವಿ

ದೆಹಲಿ : ಕರ್ನಾಟಕದಲ್ಲಿ ಬರದ ಬಿಸಿ ತೆಂಗು ಬೆಳೆಗಾರರಿಗೂ ತಟ್ಟಿದ್ದು, ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇಂಥಹ ರೈತರಿಗೆ ಕೇಂದ್ರದ ವತಿಯಿಂದ ಆರ್ಥಿಕ ನೆರವು ಒದಗಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ನಿಯೋಗ ಇಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದೆ. 

ದೆಹಲಿಯ ಸಂಸತ್ ಭವನದಲ್ಲಿ ಇಂದು ಪ್ರಧಾನಿನ್ನು ಭೇಟಿಯಾದ ನಿಯೋಗದ ಸದಸ್ಯರಾದ ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕರಾದ ಹೆಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ಸಂಸದ ಪ್ರಜ್ವಲ್ ರೇವಣ್ಣ ದೇವೇಗೌಡರಿಗೆ ಧ್ವನಿಗೂಡಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಕೊಬ್ಬರಿಗೆ ಕ್ವಿಂಟಾಲ್‌ವೊಂದಕ್ಕೆ 15,000 ರೂ.ಗಳಂತೆ ಬೆಂಬಲ ಬೆಲೆ ನೀಡಿ ನಪೇಡ್ ಮೂಲಕ ಖರೀದಿಸುವಂತಾಗಬೇಕೆಂದು ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡಿರೋದಾಗಿ ಹೇಳಿದರು. 

ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಿಕ್ಕಮಗಳೂರು, ರಾಮನಗರ, ಚಿತ್ರದುರ್ಗ ಸೇರಿದಂತೆ ರಾಜ್ಯದ 15 ಜಿಲ್ಲೆಯಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಇದನ್ನೇ ಅವಲಂಬಿಸಿದ ಸಹಸ್ರ ಕುಟುಂಬಗಳು ಬೆಳೆ ನಷ್ಟದಿಂದಾಗಿ ಕಂಗಾಲಾಗಿವೆ. ಇನ್ನು, ಬೇರೆ ಬೆಳೆಗಳಿಂದ ನಷ್ಟಕ್ಕೊಳಗಾದ ಕರ್ನಾಟಕದ ರೈತರಿಗೆ ಎಕರೆಗೆ ಕನಿಷ್ಟ ಪಕ್ಷ 50,000ರೂ.ಗಳನ್ನು ನೀಡಬೇಕೆಂದೂ ಮನವಿ ಮಾಡಲಾಯಿತು ಅಂತಾ ಮಾಜಿ ಪ್ರಧಾನಿ ವಿವರಿಸಿದರು. ರಾಜ್ಯದಲ್ಲಿ ಸುಮಾರು 5.91ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುವ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.